ಕಾಫಿ ತೋಟಕ್ಕೆ ನುಗ್ಗಿದ ಬಸ್: 20ಕ್ಕೂ ಹೆಚ್ಚು ಮಂದಿ ಗಾಯ
ಕ.ಪ್ರ. ವಾರ್ತೆ ಬೇಲೂರು ನ. 3
ತಾಲೂಕಿನ ಅರೇಹಳ್ಳಿ ಹೋಬಳಿ ಸಮೀಪ ಸರ್ಕಾರಿ ಬಸ್ ಸ್ಟೇರಿಂಗ್ಗ್ರಾಡ್ ತುಂಡಾಗಿ ಕಾಫಿ ತೋಟಕ್ಕೆ ನುಗ್ಗಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಚಿಕ್ಕಮಗಳೂರು-ಸಕಲೇಶಪುರ ಮಾರ್ಗ ಮಧ್ಯ ಅರೇಹಳ್ಳಿ ಸಮೀಪದ ವಾಟೇಹಳ್ಳಿ ಗ್ರಾಮದ ರಸ್ತೆ ಪಕ್ಕದ ಕಾಫಿತೋಟಕ್ಕೆ ಸಾರಿಗೆ ಬಸ್ನ ಸ್ಟೆರೀಂಗ್ಗ್ರಾಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನುಗ್ಗಿತು.
ಬೇಲೂರಿನಿಂದ ಸಕಲೇಶಪುರಕ್ಕೆ ಬೆಳಿಗ್ಗೆ 8 ಗಂಟೆಗೆ ಹೊರಟ ರಾಜ್ಯ ರಸ್ತೆ ಸಾರಿಗೆ ಬಸ್ ವಾಟೇಹಳ್ಳಿ ಸಮೀಪ 9 ಗಂಟೆ ಸಮಯದಲ್ಲಿ ಸ್ಟೇರಿಂಗ್ರಾಡ್ ತುಂಡಾಗಿ ಕಾಫಿ ತೋಟಕ್ಕೆ ನುಗ್ಗಿದೆ. ಬಸ್ ತೋಟದೊಳಗೆ ನುಗ್ಗಿದ ರಭಸಕ್ಕೆ ಚಾಲಕನ ತೊಡೆ ಹಾಗೂ ಕೈಗೆ ಗಂಭೀರ ಗಾಯವಾಗಿದ್ದು 20 ಕ್ಕೂ ಹೆಚ್ಚು ಪ್ರಯಾಣಿಕರರಿಗೆ ಗಾಯವಾಗಿದೆ.
ಪ್ರಯಾಣಿಕರ ಆಕ್ರೋಶ: ಕಳಪೆ ಬಸ್ ನಿರ್ವಹಣೆಯಿಂದಾಗಿ ಬೇಲೂರು ಬಿಷ್ಟಮ್ಮನಕೆರೆಗೆ ಬಸ್ ಬಿದ್ದು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆರೋಪ ಸಕಲೇಶಪುರ ಬಸ್ ಡಿಪೋ ಮೇಲಿದ್ದರೂ ಈಗಲೂ ಕೆಲವು ಕಡೆ ಕಳಪೆ ಬಸ್ ಓಡಿಸಲಾಗುತ್ತಿದೆ ಎಂಬುದು ಪ್ರಯಾಣಿಕರ ಆರೋಪ.
ಕೆರೆ ದುರಂತದ ನಂತರ ಪ್ರಯಾಣಿಕರ ಕಣ್ಣೊರೆಸಲು ಮೈಸೂರು ವಿಭಾಗದಿಂದ 6 ಸಿಟಿ ಬಸ್ ತರಿಸಲಾಗಿತ್ತು. ಆದರೆ ಈಗ ಅದರಲ್ಲಿ ಕೆಲವನ್ನು ಬೇರೆ ಮಾರ್ಗದಲ್ಲಿ ಓಡಿಸಲಾಗುತ್ತಿದ್ದು ಮತ್ತೆ ಹಳೆಯ ಬಸ್ಗಳನ್ನು ಇದೇ ಮಾರ್ಗದಲ್ಲಿ ಬಿಡಲಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಮತ್ತೆ ಸಣ್ಣಪುಟ್ಟ ಬಸ್ ಅಪಘಾತಗಳು ನಡೆಯುತ್ತಿರುವುದು ಮತ್ತು ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿರುವುದು ಸಾಕ್ಷಿಯಾಗಿದ್ದು, ದೊಡ್ಡ ಅಪಘಾತ ನಡೆಯುವ ಮೊದಲು ಸಾರಿಗೆ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ ಎಂಬುದು ಪ್ರಯಾಣಿಕರ ಮನವಿ.