ಚಾರ್ಮಾಡಿ ಪ್ರಪಾತಕ್ಕೆ ಟೆಂಪೋ ಉರುಳಿ ಇಬ್ಬರು ಸಾವು
ಬೆಳ್ತಂಗಡಿ: ಚಾರ್ಮಾಡಿ ಘಾಟ್ನ 5ನೇ ತಿರುವಿನಲ್ಲಿ ಶನಿವಾರ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋ ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಇಬ್ಬರು ಮೃತಪಟ್ಟು 11 ಜನರು ಗಾಯಗೊಂಡಿದ್ದಾರೆ.
ಮೂಲತಃ ಹಾಸನ ಶಾಂತಿಗ್ರಾಮ ಹೊಂಗೆರೆಯ, ಪ್ರಸ್ತುತ ಬೆಂಗಳೂರು ಮಲ್ಲತ್ತಹಳ್ಳಿ ಕೆಂಗುಂಟೆ ನಿವಾಸಿ ಕನಕರಾಜ್(49), ಪತ್ನಿ ಚಿಕ್ಕಮ್ಮ (46) ಮೃತರು. ಮಗ ಚೇತನ್, ಸೊಸೆ ಕವಿತಾ, ಮೊಮ್ಮಗ ಪ್ರಜ್ವಲ್, ಯಶೋಧಮ್ಮ, ಲತಾ, ಉಮೇಶ್, ಅರುಣ, ರೇಣುಕಾ, ಚಾಲಕ ಗೋವಿಂದರಾಜ್ ಮತ್ತು ಇಬ್ಬರು ಸಣ್ಣ ಮಕ್ಕಳು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಚಾಲಕ ಗೋವಿಂದ ರಾಜ್ ಕುಟುಂಬ ಮತ್ತು ಕನಕರಾಜ್ ಕುಟುಂಬದವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಗೂಡ್ಸ್ ಟೆಂಪೋದಲ್ಲಿ ಕಡೂರು- ಚಾರ್ಮಾಡಿ ಮಾರ್ಗವಾಗಿ ಹೊರಟಿದ್ದರು. ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 5ನೇ ತಿರುವಿನಲ್ಲಿ ಚಾಲಕನ ಅಜಾಗರೂಕತೆಯಿಂದ ರಸ್ತೆಯ ಬಲಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಟೆಂಪೋ ಪ್ರಪಾತಕ್ಕೆ ಉರುಳಿ ಬಿತ್ತು. ಪರಿಣಾಮ ಕನಕರಾಜ್ ಮತ್ತು ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.