ನಾಳೆಯಿಂದ ಜಿಲ್ಲೆಯಲ್ಲಿ ಅರಣ್ಯ ಸಚಿವರ ಪ್ರವಾಸ
ಹಾಸನ: ರಾಜ್ಯ ಅರಣ್ಯ, ಪರಿಸರ ಸಚಿವ ರಮಾನಾಥ್ ರೈ ನವೆಂಬರ್ 4 ರಂದು ಸಂಜೆ 5 ಕ್ಕೆ ಹಾಸನಕ್ಕೆ ಆಗಮಿಸಿ ಗೆಂಡೆಕಟ್ಟೆ ಅರಣ್ಯ ವಿಶ್ರಾಂತಿ ಗೃಹದಲ್ಲಿ ವಾಸ್ತವ್ಯ ಮಾಡುವರು. ಸಚಿವರು 5 ರಂದು ಬೆಳಗ್ಗೆ 10.45 ಕ್ಕೆ ಆಲೂರು ತಾಲೂಕಿನ ರಾಯರ ಕೊಪ್ಪಲಿನ ಸಭಾಂಗಣದಲ್ಲಿ ಆಲೂರು ತಾ. ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರೊಡನೆ ಕಾಡಾನೆ ಹಾವಳಿ ಸಮಸ್ಯೆ, ಪರಿಹಾರೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಲಿರುವರು.
ಅಂದು ಮಧ್ಯಾಹ್ನ 12.10 ಕ್ಕೆ ದೊಡ್ಡ ಬೆಟ್ಟ ಅರಣ್ಯ ಪ್ರದೇಶದ ಕಾಡಾನೆಗಳ ಚಲನವಲನ ಮತ್ತು ಅರಣ್ಯ ಪ್ರದೇಶ ವೀಕ್ಷಣೆ ಮಾಡುವರು. ನಂತರ ಮಧ್ಯಾಹ್ನ 3.45 ಕ್ಕೆ ಸಕಲೇಶಪುರ ತಾಲೂಕಿನ ಆನೆ ಹಾವಳಿ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡುವ ಸಚಿವರು ಸಂಜೆ 5.30 ಕ್ಕೆ ಸಕಲೇಶಪುರ ತಾಲೂಕಿನ ಪ್ಲಾಂಟರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರೊಡನೆ ಸಮಲೋಚನಾ ಸಭೆಯಲ್ಲಿ ಭಾಗವಹಿಸುವರು. ಅಂದು ಸಂಜೆ ಗೆಂಡೆಕಟ್ಟೆ ಅರಣ್ಯ ವಿಶ್ರಾಂತಿ ಗೃಹಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. 6 ರಂದು ಬೆಳಗ್ಗೆ 10 ಕ್ಕೆ ಹಾಸನದ ಅರಣ್ಯ ಭವನದಲ್ಲಿ ಹಾಸನ ವೃತ್ತದ ಪ್ರಗತಿ ಪರಿಶೀಲನೆ ನಡೆಸುವರು.ನಂತರ ಬೆಳಗ್ಗೆ 11 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಅರಣ್ಯ ವೃತ್ತದ ವಿವಿಧ ವಿಭಾಗಗಳ ವಿವಿಧ ಯೋಜನೆಗಳಡಿಯಲ್ಲಿನ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3.40 ಕ್ಕೆ ಬೇಲೂರು ವಲಯದ ಆರ್.ಡಿ.ಹಳ್ಳ ಅರಣ್ಯ ಪ್ರದೇಶದ ನೈಸರ್ಗಿಕ ಶ್ರೀಗಂಧದ ಗಿಡಗಳ ಬೆಳವಣಿಗೆಯ ವೀಕ್ಷಣೆ ಮಾಡುವ ಸಚಿವರು ಸಂಜೆ 5.20 ಕ್ಕೆ ಹಾಸನದಿಂದ ಬೆಂಗಳೂರಿಗೆ ಪ್ರಯಾಣ ಮಾಡುವರು.