ಬೆಲೆ ಲೆಕ್ಕಿಸದೆ ಪಟಾಕಿ ಖರೀದಿ ಸಂಭ್ರಮ
ಕನ್ನಡಪ್ರಭ ವಾರ್ತೆ ಹಾಸನ ನ. 3
ದೀಪಾವಳಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಭಾನುವಾರ ಮಕ್ಕಳೊಂದಿಗೆ ಬಂದು ಪಟಾಕಿ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಧನಲಕ್ಷ್ಮಿ ಪೂಜೆಯ ದಿನದಂದು ಪಟಾಕಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದರು.
ಬೆಳಕಿನ ಹಬ್ಬಕ್ಕಾಗಿ ಸಾರ್ವಜನಿಕರು ಸಿದ್ಧರಾಗಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಮಹಿಳೆಯರು ದೀಪ ಹಚ್ಚಲು ಹಣತೆ ಇತ್ಯಾದಿ ಕೊಳ್ಳಲು ಮುಂದಾದರೇ ಮಕ್ಕಳು ಪಟಾಕಿಯನ್ನು ಕೊಳ್ಳಲು ಮುಂದಾಗಿದ್ದರು. ಹಾಗೇ ಹಣ್ಣು ಹೂವು ವ್ಯಾಪಾರ ಬೆಲೆ ಏರಿಕೆಯಲ್ಲೂ ಜೋರಾಗಿಯೇ ನಡೆಯಿತು.
ಈ ಬಾರಿ ನಾಡಿನಾದ್ಯಂತ ಉತ್ತಮ ಮಳೆಯಾಗಿದ್ದು, ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಜಿಲ್ಲಾದ್ಯಂತ ಎಲ್ಲೆಡೆ ಸಂಭ್ರಮ ಸಡಗರ ಉಂಟಾಗಿದೆ. ಇದರಿಂದ ಪಟಾಕಿ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ನಗರಸಭೆಯ ವಸ್ತುಪ್ರದರ್ಶನದ ಆವರಣದಲ್ಲಿ ನಿರ್ಮಿಸಿರುವ ಅಂಗಡಿಗಳಿಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಜನರು ನಾನಾ ಬಗೆಯ ಪಟಾಕಿಗಳನ್ನು ಖರೀದಿಸಿದರು.
ಜೊತೆಗೆ ತಾಲೂಕು ಕೇಂದ್ರಗಳಲ್ಲಿಯೂ ಪಟಾಕಿ ವ್ಯಾಪಾರ ಬಿರುಸಿನಿಂದಲೇ ನಡೆಯುತ್ತಿದೆ. ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಅರಕಲಗೂಡು, ಆಲೂರು, ಸಕಲೇಶಪುರ ಮ್ತತು ಹೊಳೆನರಸೀಪುರ ತಾಲೂಕುಗಳಲ್ಲಿ ಹಬ್ಬ ಆಚರಿಸಲು ಪಟಾಕಿಗಳ ಖರೀದಿ ಜೋರಾಗಿ ನಡೆಯುತ್ತಿದೆ. ಪಟಾಕಿ ಖರೀದಿ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಜನರು ಪಟಾಕಿ ಅಂಗಡಿಗಳ ಮುಂದೆ ಜಮಾಯಿಸಿದ್ದರು. ಭಾನುವಾರವೂ ಬಿರುಸು ಕಂಡು ಬಂದಿದೆ.
ನಗರಸಭೆಯ ವಸ್ತುಪ್ರದರ್ಶನದ ಆವರಣದಲ್ಲಿ 40ಕ್ಕೂ ಹೆಚ್ಚು ಅಂಗಡಿಗಳಲ್ಲಿ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆಯನ್ನು ಲೆಕ್ಕಿಸದೆ ಜನರು ಮುಗಿಬಿದ್ದು ಪಟಾಕಿಯನ್ನು ಮಕ್ಕಳಿಗೆ ಕೊಡಿಸುತ್ತಿದ್ದು, ಇದು ವ್ಯಾಪಾರಿಗಳಿಗೆ ಹರ್ಷ ತಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿ ಬೆಲೆ ಹೆಚ್ಚು. ಬೆಲೆ ಏರಿಕೆಯ ಬಗ್ಗೆ ಜನ ತಲೆ ಕೆಡಿಸಿಕೊಂಡಿಲ್ಲ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬ ಬರುತ್ತದೆ. ಮಕ್ಕಳಿಗೆ ಪಟಾಕಿ ಕೊಡಸಿದೇ ಹೋದರೆ ಬೇಜಾರು ಮಾಡಿಕೊಳ್ಳುತ್ತಾರೆ. ಹಾಗಾಗಿ ಪೋಷಕರು ಬೆಲೆ ಏರಿಕೆಯಾದರೂ ಪಟಾಕಿ ಖರೀದಿಸಲು ಮುಂದಾಗಿದ್ದಾರೆ ಎಂದು ಪಟಾಕಿ ಮಾರಾಟಗಾರರು ಹೇಳುತ್ತಾರೆ.
125 ಡೆಸಿಬಲ್ಗಳಿಗಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ರಾತ್ರಿ 10 ಯಿಂದ ಬೆಳಗಿನ ಜಾವ 6 ರವರೆಗೆ ಪಟಾಕಿ ಸಿಡಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ಧವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಆಸ್ಪತ್ರೆ ಶಾಲೆ, ಪ್ರಾರ್ಥನಾ ಮಂದಿರ ಸುತ್ತ ಮುತ್ತ ಯಾವುದೇ ರೀತಿಯ ಶಬ್ಧ ಉಂಟು ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಪಟಾಕಿ ಸಿಡಿಸುವುದರಿಂದ ರಕ್ತದೊತ್ತಡ, ಹೃದಯಘಾತ, ಉಸಿರಾಟದ ತೊಂದರೆ, ಅಸ್ತಮಾ ಮತ್ತಿತರ ಶ್ವಾಸಕೋಶ ಕಾಯಿಲೆಗಳ ಉಲ್ಬಣವಾಗುತ್ತದೆ. ಶಬ್ದ ಮಾಲಿನ್ಯದಿಂದ ಶ್ರವಣ ಸಮಸ್ಯೆಗಳ ಸಾಧ್ಯತೆ ಇದೆ. ಶಿಶು ಹಾಗೂ ಗರ್ಭಿಣಿ ಸ್ತ್ರೀಯರು, ವಯೋವೃದ್ಧರಿಗೆ ತೊಂದರೆ ಉಂಟು ಮಾಡುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸೋಣ.