ಸುದ್ದಿ ಸಂಕ್ಷೇಪ
ಕ್ರಿಕೆಟ್ ಬೆಟ್ಟಿಂಗ್:
ಮೂವರ ಬಂಧನ, ರು. 1,14,070 ವಶ
ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ, 1,14,070 ನಗದನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.
ನಗರದ ವಿಶ್ವೇಶ್ವರಯ್ಯ ಬಡಾವಣೆಯ ಮಂಜುನಾಥ ಎಂಬುವರ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಭಾರತ-ಆಸ್ಟೇಲಿಯಾ ನಡುವಿನ ಕ್ರಿಕೆಟ್ ಪಂದ್ಯದ ಬೆಟ್ಟಿಂಗ್ ನಡೆಯುತ್ತಿದ್ದಾಗ ಡಿಸಿಐಬಿ ನಿರೀಕ್ಷಕ ಶಶಿಧರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ತೆರಳಿ ದಾಳಿ ಮಾಡಿದರು.
ವಿಶ್ವೇಶ್ವರಯ್ಯ ಬಡಾವಣೆಯ ಮಂಜುನಾಥ (36), ಹೇಮಾವತಿ ಆಸ್ಪತ್ರೆ ಹಿಂಭಾಗದ ಸಿದ್ದಾರ್ಥ ಜೈನ್ (26) ಎಂಬುವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 76,570 ರು. ವಶಪಡಿಸಿಕೊಂಡು, ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ ಕೃಷ್ಣ ಕಾಂಪ್ಲೆಕ್ಸ್ ನೆಲಮಾಳಿಗೆ ಮುಂಭಾಗದ ರಸ್ತೆ ಬದಿಯಲ್ಲಿ ಪರವಾನಗಿ ಇಲ್ಲದೆ ಭಾರತ-ಆಸ್ಟೇಲಿಯಾ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯದ ಬೆಟ್ಟಿಂಗ್ ನಡೆಯುತ್ತಿದ್ದಾಗ ಡಿಸಿಐಬಿ ನಿರೀಕ್ಷಕ ಶಶಿಧರ್ ದಾಳಿ ನಡೆಸಿ ತಾಲೂಕಿನ ದೇವರಾಯಪಟ್ಟಣದ ಚೌಡೇಗೌಡ (30) ಎಂಬಾತನ್ನು ಬಂಧಿಸಿ, ಪಣಕ್ಕಿಟ್ಟಿದ್ದ 37,500 ನಗದು ವಶಪಡಿಸಿಕೊಂಡಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಳಗೆರೆಯಮ್ಮ ದೇವಿ ರಥೋತ್ಸವ
ಚನ್ನರಾಯಪಟ್ಟಣ: ಪಟ್ಟಣದ ಅಧಿದೇವತೆ ವಳಗೆರೆಯಮ್ಮ ದೇವಿ ರಥೋತ್ಸವ ಹಾಗೂ ಸಿಡಿ ಉತ್ಸವ ಅದ್ದೂರಿ ಹಾಗೂ ಸಂಭ್ರಮದಿಂದ ಜರುಗಿತು. ಭಾನುವಾರ ಬೆಳಗ್ಗೆಯಿಂದಲೇ ಅಮ್ಮನವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರದಲ್ಲಿ ಬ್ರಾಹ್ಮಣ ಸಮುದಾಯದಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥಕ್ಕೆ ಬಲಿ ನೀಡಿ ರಥೋತ್ಸವ ನೆರವೇರಿತು. ಪಟ್ಟಣದ ಗಣಪತಿ ಪೆಂಡಾಲ್ನಿಂದ ವಳಗೆರೆ ಅಮ್ಮನವರ ದೇವಸ್ಥಾನದವರಗೆ ಭಕ್ತರು ರಥವನ್ನು ಎಳೆದರು. ನಂತರದಲ್ಲಿ ಅಮ್ಮನವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು. ಅಮ್ಮನವರ ಸನ್ನಿದಿಯಲ್ಲಿ ಬೆಳಗ್ಗೆಯಿಂದಲೇ ಹೋಮ, ವಿಶೇಷ ಪೂಜೆ ಹಾಗೂ ದಾಸೋಹ ಕಾರ್ಯಕ್ರಮ ಜರುಗಿತು.
ಬಾಲಕ ನಾಪತ್ತೆ
ಹೊಳೆನರಸೀಪುರ: ಪಟ್ಟಣದ ವಸಂತ ಎಂಬುವರ ಪುತ್ರ ವಿನಯ್ಕುಮಾರ(12) ಆಟವಾಡಿಕೊಂಡು ಬರುವುದಾಗಿ ಹೇಳಿ ಹೋದವನು ಕಾಣೆಯಾಗಿದ್ದಾನೆ. 4 ಅಡಿ, ಎಣ್ಣೆಗೆಂಪ್ಪು ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾನೆ. ತಾಯಿ ವಸಂತ ನಗರ ಠಾಣೆಗೆ ದೂರು ನೀಡಿದ್ದಾರೆ.