ಕಬ್ಬಿಗೆ ಬೆಂಬಲ ನಿಗದಿ ಮಾಡುವಂತೆ ಕುರುಬೂರು ಆಗ್ರಹ
ಟಿ.ನರಸೀಪುರ: ರಾಜ್ಯ ಸರ್ಕಾರ ಕೂಡಲೇ ಬತ್ತಕ್ಕೆ ಪ್ರೋತ್ಸಾಹ ಧನ ಮತ್ತು ಕಬ್ಬಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಘೋಷಣೆ ಮಾಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ರಾಜ್ಯದ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕಟಾವು ಆರಂಭವಾಗುವ ಮೊದಲೇ ಬತ್ತದ ಬೆಲೆ ಕುಸಿದಿದೆ. ಕ್ವಿಂಟಾಲ್ ಬತ್ತಕ್ಕೆ 2200 ರು.ಗಳಿದ್ದ ಬೆಲೆ, 1200 ರು.ಗೆ ಇಳಿಕೆಯಾಗಿದ್ದರಿಂದ ರೈತರು ಕಂಗಲಾಗಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಬತ್ತ ಖರೀದಿ ಕೇಂದ್ರಗಳನ್ನು ತೆರೆದು, ನಿಗದಿಪಡಿಸಿರುವ ಬೆಂಬಲ ಬೆಲೆ 1345 ರು. ಜತೆಗೆ ಹೆಚ್ಚುವರಿಯಾಗಿ 500 ರು. ಪ್ರೋತ್ಸಾಹ ಧನವನ್ನು ನೀಡಿ, ರೈತರಿಂದ ನೇರವಾಗಿ ಖರೀದಿಸಲು ಮುಂದಾಗಬೇಕು. ಭಿತ್ತನೆ ಬೀಜ, ಗೊಬ್ಬರಕ್ಕೆ ಹಾಗೂ ನೀಡುವ ಕೂಲಿ ಏರಿಕೆಯಾಗಿ ರೈತರಿಗೆ ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ರಾಗಿ ಮತ್ತು ಜೋಳಕ್ಕೂ 300 ರು. ಪ್ರೋತ್ಸಾಹವನ್ನು ನೀಡಬೇಕೆಂದು ಒತ್ತಾಯಿಸಿದರು.
ನಾಳೆ ಪ್ರತಿಭಟನೆ: ನರಸೀಪುರದಲ್ಲಿ ನ.6ರಂದು ನಡೆಯುವ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಕ್ರಮದ ದಿನದಂದೇ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಬತ್ತಕ್ಕೆ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ಕಪಿಲಾ ಸೇತುವೆ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.