ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿಸರ್ಗದ ಒಡಲಲ್ಲಿ ಶಿಕ್ಷಣ: ರೊಟ್ಟಿಕಲ್ಲು ತಾಣದಲ್ಲಿ ಚಾರಣ

Rashmi Kasaragodu
Updated On : 5 Nov 2013, 12:15 pm

ಕ.ಪ್ರ.ವಾರ್ತೆ   ಸಕಲೇಶಪುರ   ನ.4
ಪ್ರಕೃತಿ ಎಂದೂ ಬರಿದಾಗದ ಜ್ಞಾನದ ಗಣಿ. ವಿದ್ಯಾರ್ಥಿಗಳು ಆಸಕ್ತಿ ಮತ್ತು ಸಹನೆಯಿಂದ ಇದರ ಅಧ್ಯಯನ ನಡೆಸಿದರೆ ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ಇಬ್ಬನಿ ರೆಸಾರ್ಟ್ ಮಾಲೀಕ ಎಚ್.ಎಚ್.ಮಂಜುನಾಥ್ ಹೇಳಿದರು.
ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾಹಸ ಬಳಗದ ವತಿಯಿಂದ ಇತ್ತೀಚೆಗೆ ಸಕಲೇಶಪುರ ತಾಲೂಕಿನ ಅಚ್ಚನಹಳ್ಳಿಯಲ್ಲಿ ನಿಸರ್ಗದ ಒಡಲಲ್ಲಿ ಶಿಕ್ಷಣ ಎಂಬ ಶೀರ್ಷಿಕೆಯಡಿ ರೊಟ್ಟಿಕಲ್ಲು ಪ್ರದೇಶಕ್ಕೆ ಹಮ್ಮಿಕೊಂಡಿದ್ದ ಚಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ಸಂಪತ್ತು ಎಲ್ಲರಿಗೂ ಸೇರಿದ್ದು. ನಾವೆಲ್ಲ ಆ ಸಂಪತ್ತಿನ ಒಡೆಯರು. ಅದು ನಮ್ಮದು ಎಂಬ ಭಾವನೆಯಿಂದ ಅದನ್ನು ನೋಡಬೇಕು, ಸವಿಯಬೇಕು, ಆನಂದ ಪಡಬೇಕು. ಅದನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕಾಗಿ ಕಾಯ್ದಿರಿಸಬೇಕು, ಇಂದು ನಗರದ ಯಾಂತ್ರಿಕ ಜೀವನದ ಒತ್ತಡಗಳಿಗೆ ಸಮಾಧಾನ ಸಿಗಬಹುದಾದರೆ ಅದು ಪ್ರಕೃತಿಯಿಂದ ಮಾತ್ರ ಸಾಧ್ಯ. ಆದರೆ ಇದನ್ನು ಅರಿತುಕೊಳ್ಳದ ಕೆಲವರು ಅದನ್ನು ನಾಶಪಡಿಸುವುದರಲ್ಲಿ ಸುಖವನ್ನು ಕಾಣುತ್ತಿದ್ದಾರೆ ಎಂದು ಹೇಳಿದರು.
ಶುದ್ಧ ಪ್ರಕೃತಿಯ ಸ್ಥಳಗಳನ್ನು ಮೋಜಿನ ತಾಣಗಳನ್ನಾಗಿ ಅಪವಿತ್ರಗೊಳಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನಿಸರ್ಗ ನಲುಗುತ್ತಿದೆ. ಇಂತಹ ಅಪಾಯಕಾರಿ ಪ್ರವೃತ್ತಿಯನ್ನು ತಡೆಯದಿದ್ದರೆ ಮುಂದೆ ಮನುಕುಲ ಪಶ್ಚಾತ್ತಾಪ ಪಡಬೇಕಾಗುತ್ತದೆ. ಇಂದಿನ ವಿದ್ಯಾರ್ಥಿ ಸಮುದಾಯ ಇದರ ಬಗೆಗೆ ಅರಿವು ಬೆಳೆಸಿಕೊಂಡು, ಪ್ರಕೃತಿಯನ್ನು ಉಳಿಸಲು ಬದ್ಧರಾಗಬೇಕೆಂದು ಕರೆ ನೀಡಿದರು.
ಅಚ್ಚನಹಳ್ಳಿ  ಗ್ರಾಮಾಭಿವೃದ್ಧಿ ಸಮಿತಿಯ ಮಾಜಿ ಕಾರ್ಯದರ್ಶಿ ಎಚ್.ಎಂ.ಪೂರ್ಣೇಶ್ ಮಾತನಾಡಿ, ಇಂದು ಮನುಷ್ಯನ ಶೋಷಣೆಯ ಬಗೆಗೆ ವಿರೋಧದ ದನಿಯತ್ತುವ ನಾವು ಪ್ರಕೃತಿ ಶೋಷಣೆಯ ವಿಷಯ ಬಂದಾಗ ದನಿ ಕ್ಷೀಣವಾಗುತ್ತದೆ. ಇರುವ ನಿಸರ್ಗ ಸಂಪತ್ತನ್ನು ಹೆಚ್ಚಿಸಿ ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಅದನ್ನು ಸಮುದಾಯದ ಏಳಿಗೆಯ ಸೋಪಾನವಾಗಿಸಲು ಸಾಧ್ಯವಿದೆ. ಆದರೆ ಅದಕ್ಕೆ ವಿರುದ್ಧವಾಗಿ ನಿಸರ್ಗವನ್ನು ಬರಿದಾಗಿಸಿ ನಾವು ಶ್ರೀಮಂತರಾಗುವ ಭ್ರಮೆಯಲ್ಲಿದ್ದೇವೆ. ಇದು ಮುಂದೆ ಸರ್ವನಾಶಕ್ಕೆ ಕಾರಣವಾಗುತ್ತದೆ. ಅದಕ್ಕೆ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಅಚ್ಚನಹಳ್ಳಿ ಗ್ರಾಮಪಂಚಾಯ್ತಿ ಸದಸ್ಯ ಎಂ.ಆರ್.ಮೋಹನ್, ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಸದಸ್ಯ ಎಂ.ಎನ್.ಚಂದ್ರೇಗೌಡ ಪರಿಸರದ ಮಹತ್ವವನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ ಮಾತನಾಡಿ,  ತರಗತಿಯ ನಡುವಿನ ಶಿಕ್ಷಣಕ್ಕೆ ಮಿತಿಗಳಿವೆ. ಆದರೆ ನಿಸರ್ಗದ ಮಡಿಲಿನ ಶಿಕ್ಷಣದ ವ್ಯಾಪ್ತಿ ಅಗಾಧವಾದುದು. ಅದರ ಒಂದು ಭಾಗವಾಗಿರುವ ಚಾರಣ ಎನ್ನುವುದು ಕಲ್ಮಶವಾದ ಮನಸ್ಸುಗಳನ್ನು ಶುದ್ಧಗೊಳಿಸುವ ಯಾನ. ದೈಹಿಕ ದೃಢತೆ, ಮಾನಸಿಕ ನೆಮ್ಮದಿ ಹಾಗೂ ಬೌದ್ಧಿಕ ವಿಕಾಸಕ್ಕೆ ನಿಸರ್ಗ ಶಿಕ್ಷಣ ಕೇಂದ್ರ. ಆದರೆ ಇಂದು ಕೆಲವರು ಚಾರಣವನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ನುಡಿದರು.
ಚಾರಣ ಕೇಂದ್ರಗಳಲ್ಲಿ ತ್ಯಾಜ್ಯವೆಸೆದು, ಅಲ್ಲಿನ ಶಾಂತಿಯನ್ನು ಭಂಗಗೊಳಿಸಿ ವಿಕೃತ ಆನಂದವನ್ನು ಅನುಭವಿಸುತ್ತಾರೆ. ಅನಗತ್ಯ ಸಾಹಸ ಮಾಡಲು ಹೋಗಿ ದುರಂತಗಳಿಗೆ ಈಡಾಗುತ್ತಿದ್ದಾರೆ. ಇದರಿಂದ ಚಾರಣದ ಬಗೆಗೆ ತಪ್ಪುಕಲ್ಪನೆ ಬರುವ ಅಪಾಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಅತ್ಯಂತ ಶುದ್ಧವಾಗಿರುವ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತೆ ತಮ್ಮ ಚಾರಣವನ್ನು ಅನುಭವಿಸಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ಉಪನ್ಯಾಸಕ ಕಾಂತರಾಜ್ ಸ್ವಾಗತಿಸಿದರು. ಗ್ರಂಥಪಾಲಕ ಎನ್. ಮಂಜುನಾಥ್ ವಂದಿಸಿದರು. ವಿದ್ಯಾರ್ಥಿನಿ ಕಾವ್ಯ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ.ಗೋಪಾಲ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಮಾದೇಗೌಡ ಇತರ ಉಪನ್ಯಾಸಕರು ಇದ್ದರು. ಕಾರ್ಯಕ್ರಮದ ನಂತರ ಕಾಲೇಜಿನ 75 ಜನ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ 20 ಕಿ.ಮೀ.ಗಳ ಚಾರಣ ಕೈಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement