ಪಶುಸಾಕಣೆ ತರಬೇತಿ ಕೇಂದ್ರ ತೆರೆಯಲು ರೈತಸಂಘ ಆಗ್ರಹ
ರಾಮನಾಥಪುರ: ರೈತರು ಬೇಸಾಯದ ಜೊತೆಗೆ ಲಾಭ ತರುವಂತಹ ಕೋಳಿ, ಕುರಿ, ಹಂದಿ ಹಾಗು ಹೈನುಗಾರಿಕೆಯನ್ನು ಹೆಚ್ಚಿಸುವುದರಿಂದ ನಮ್ಮ ದಿನನಿತ್ಯದ ಆರ್ಥಿಕ ಸ್ಥಿತಿ ಸುಧಾರಿಸುವುದರೊಂದಿಗೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಹೊನಗಾನಳ್ಳಿ ಎಚ್.ಇ.ಜಗದೀಶ್ ತಿಳಿಸಿದರು.
ರೈತರು ಸಾಕುಪ್ರಾಣಿಗಳಾದ ಕೋಳಿ, ಕುರಿ, ಹಂದಿ ಹಾಗೂ ಹೈಬ್ರಿಡ್ ಹಸು, ಮುರ್ರ ಜಾತಿಗೆ ಸೇರಿದ ಎಮ್ಮೆ ಇವುಗಳ ಸಾಕಾಣಿಕೆ ಮತ್ತು ತರಬೇತಿಯನ್ನು ರೈತರಿಗೆ ಸರಿಯಾದ ಮಾಹಿತಿಯೊಂದಿಗೆ ನೀಡುವ ಸಲುವಾಗಿ ಆಯಾ ತಾಲೂಕುಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯುವುದರಿಂದ ರೈತರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಅರಕಲಗೂಡು ತಾಲೂಕಿನ ರಾಮನಾಥಪುರದ ತಂಬಾಕು ಮಂಡಳಿ ಎದುರು ಸರ್ಕಾರಿ ಖಾಲಿ ಸ್ಥಳ ಇದ್ದು ಈ ರೀತಿ ತರಬೇತಿ ಕೇಂದ್ರಗಳನ್ನು ಇಲ್ಲಿ ನಿರ್ಮಿಸುವುದರಿಂದ ಸುತ್ತ ಮುತ್ತಲಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೆಚ್ಚು ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗುವುದು. ಜಿಲ್ಲೆಯಲ್ಲಿ ಈ ಸಾಕು ಪ್ರಾಣಿಗಳ ಮರಿಗಳ ವಿತರಣೆ ಅಷ್ಟಾಗಿ ಕಂಡುಬರುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ಸಾಕುಪ್ರಾಣಿಗಳ ಸಾಕಾಣಿಕೆ, ಮರಿಗಳ ವಿತರಣೆ ಹಾಗು ಕುರಿಗಳ ಸಾಕಾಣಿಕೆಗೆ ಕುರಿಮರಿಗಳ ಉಚಿತ ವಿತರಣೆ ಇದ್ದರೂ ನಮ್ಮ ಜಿಲ್ಲೆಯಲ್ಲಿ ಏಕಿಲ್ಲ ಪ್ರತಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ರೈತರಿಗೆ ಪಶುಗಳ ಔಷಧಿ ಸರಿಯಾಗಿ ದೊರೆಯದೆ ಮತ್ತು ಚಿಕಿತ್ಸೆಗೂ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಬಡ ರೈತರು ಪಶುಗಳ ಔಷದಿಯನ್ನು ಹೆಚ್ಚು ಬೆಲೆ ತೆತ್ತು ಹೊರಗಿನ ಮೆಡಿಕಲ್ ಸ್ಟೋರ್ಗಳಲ್ಲಿ ಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದರು.