ವರ್ಷದಲ್ಲಿ ಸಾವಿರ ನಾಟಕ ಪ್ರದರ್ಶಿಸುವ ಗುರಿ: ಹಂಸಲೇಖ
ಕನ್ನಡಪ್ರಭ ವಾರ್ತೆ ಹಾಸನ ನ. 4
ಒಂದು ವರ್ಷದಲ್ಲಿ ಒಂದು ಸಾವಿರ ನಾಟಕಗಳನ್ನು ಪ್ರದರ್ಶಿಸಬೇಕೆಂಬ ಗುರಿ ಹೊಂದಲಾಗಿದೆ ಎಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಹಂಸಲೇಖ ದೇಸೀ ಸಂಸ್ಕೃತಿ ಕಲಾ ತಂಡದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯಾಯ ಜಿಲ್ಲೆಯ ಸಾಹಿತಿಗಳು, ಕಲಾವಿದರ ಸಲಹೆ ಪಡೆದು ವಿಷಯಗಳ ಕುರಿತು ಚರ್ಚಿಸಿ, ಸ್ಥಳೀಯ ಪರಿಸರಕ್ಕೆ ಪೂರಕವಾಗುವ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಉದ್ದೇಶವಿದೆ ಎಂದು ಹಂಸಲೇಖ ಹೇಳಿದರು.
ವೈಜ್ಞಾನಿಕ ಕ್ಷೇತ್ರದಲ್ಲಿ ದೇಶ ಸಾಕಷ್ಟು ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಪ್ರಯೋಗಗಳು ಆಗಬೇಕಾದ ಅಗತ್ಯವಿಲ್ಲ. ಕ್ಷಿಪಣಿಯಂತಹ ದಾಳಿಯಿಂದ ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ನಾಶ ಮಾಡ ಬಹುದು. ಆದರೆ ಜನರಿಗೆ ಶಾಂತಿ, ನೆಮ್ಮದಿ ಬೇಕು. ಕಲೆ, ಸಂಸ್ಕೃತಿ ಉಳಿಯಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ನುಡಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮುಂದೆಯೂ ಕಸಾಪ ಚಟುವಟಿಕೆ ಹೆಚ್ಚು ಹೆಚ್ಚು ವಿಸ್ತರಿಸಲಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜನಾರ್ದನ್ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ ಹೊಯ್ಸಳ ಸಿರಿ ತ್ರೈಮಾಸಿಕ ಬಿಡುಗಡೆ ಮಾಡಲಾಗಿದೆ. 3ನೇ ಸಂಚಿಕೆಯಲ್ಲಿ ಲೆಕ್ಕ ಪತ್ರಗಳನ್ನು ಪಾರದರ್ಶಕವಾಗಿ ಜನರ ಮುಂದಿಡಲಾಗಿದೆ. ಮುಂದೆಯೂ ಕಾರ್ಯಕ್ರಮಗಳನ್ನು ರೂಪಿಸಲು ದಾನಿಗಳು ನೆರವು ನೀಡಬೇಕೆಂದು ಮನವಿ ಮಾಡಿದರು.
ಜಾನಪದ, ಸಿನಿಮಾ ಗೀತೆಗಳ ಸಮ್ಮಿಲನದಲ್ಲಿ ನಡೆದ ಕಾರ್ಯಕ್ರಮ ತುಂಬಾ ಅಪರೂಪ ಎನಿಸಿತು. ಹಂಸಲೇಖ ದೇಸೀ ಸಂಸ್ಕತಿ ಕಲಾ ತಂಡದ ವಿದ್ಯಾರ್ಥಿಗಳು ನೃತ್ಯ ಸಂಯೋಜಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ವಿಜಯಾದಬ್ಬೆ, ಹೊಳೆನರಸೀಪುರದ ಜಾನಪದ ಕಲಾವಿದ ತಂಬೂರಿ ಮರಿಯಪ್ಪ ಅವರಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಎಸ್.ಕೆ. ಕರೀಂಖಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಪತ್ನಿ, ಗಾಯಕಿ ಲತಾ ಹಂಸಲೇಖ, ಶ್ರೀ ವಿಜಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಜ.ನಾ.ತೇಜಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಆರ್.ಪಿ.ವೆಂಕಟೇಶ ಮೂರ್ತಿ ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.