ಸಡಗರ, ಸಂಭ್ರಮದ ದೀಪಾವಳಿ
ಕನ್ನಡಪ್ರಭ ವಾರ್ತೆ ಆಲೂರು ನ.4
ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ತಾಲೂಕಿನ ಕಸಬಾ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಹಬ್ಬದಂದು ಪಿತೃ ಪಕ್ಷಾಚರಣೆ ನಡೆಯುತ್ತಿದ್ದು, ಇದಕ್ಕಾಗಿ ತರಕಾರಿ, ಪಟಾಕಿ, ಕೋಳಿ ಹಾಗು ಕುರಿ ಹಾಗೂ ಇತರೆ ಮಾಂಸಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಹೂವು ಹಣ್ಣುಗಳ ವ್ಯಾಪಾರ ಕ್ಷೀಣವಾಗಿತ್ತು. ಖರೀದಿ ವಸ್ತುಗಳನ್ನು ಮುಖ್ಯವಾಗಿ ಪ್ರತಿ ಮನೆಯಲ್ಲೂ ಮಾಡಿ ಎಡೆಗೆ ಇಡುವುದರಿಂದಾಗಿ ಕಳೆದ ಒಂದು ವಾರದಿಂದಲೇ ದಿನಸಿ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.
ಕಸಬಾ ಹೋಬಳಿಯ ಸುತ್ತಮುತ್ತಲ ಹುಣಸವಳ್ಳಿ, ಹಳೆ ಆಲೂರು, ಹಚಿತನಮನೆ, ದೊಡ್ಡ ಕಣಗಾಲು, ಕಿರಳ್ಳಿ, ಜಿ.ತಿಮ್ಮನ ಹಳ್ಳಿ, ಕೆಂಚನಹಳ್ಳಿ, ಕಿಗ್ಗಟ್ಟ ಮುಂತಾದ ಗ್ರಾಮಗಳಲ್ಲಿ ಪಿತೃ ಪಕ್ಷ ಆಚರಿಸಲಾಯಿತು. ಈ ಹಬ್ಬಗಳು ಒಂದೊಂದು ಗ್ರಾಮದಲ್ಲಿ ಒಂದೊಂದು ದಿನ ಆಚರಿಸುವದರಿಂದ ನೆಂಟರು ಸ್ನೇಹಿತರು ಸಸ್ಯಾಹಾರ ಹಾಗು ಬಾಡೂಟ ಭೋಜನ ಸವಿದರು.
ಪಟ್ಟಣದಲ್ಲಿರುವ ಮದ್ಯದಂಗಡಿಗಳಲ್ಲಿ ಪಟಾಕಿ ಅಂಗಡಿಗಳಿಗಿಂತಲೂ ವಹಿವಾಟು ಚೆನ್ನಾಗಿ ನಡೆಯಿತು. ಕುರಿ ಮಾಂಸದ ಬೆಲೆ ಗಗನಕ್ಕೇರಿರುವುದರಿಂದ, ಜನ ಕೋಳಿ ಮಾಂಸದ ಬೆಲೆ ಹೆಚ್ಚಿದ್ದರೂ ವಿಧಿಯಿಲ್ಲದೆ ಕೋಳಿ ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿದ್ದರು. ತರಕಾರಿ ಬೆಲೆ ಆಲೂರಿನಲ್ಲಿ ಹಾಸನಕ್ಕೆ ಹೋಲಿಸಿದರೆ ಶೇ.20 ಹೆಚ್ಚಾಗಿದ್ದರೂ ಜನ ವಿಧಿಯಿಲ್ಲದೆ ತರಕಾರಿ ಕೊಂಡುಕೊಂಡರು. ಕನ್ನಡ ರಾಜ್ಯೋತ್ಸವದಂದು ಹೂವು ಹಣ್ನೂ ತರಕಾರಿ ಕೋಳಿ ಹಾಗೂ ಮಾಂಸದ ಬೆಲೆ ಮಾಮೂಲಿನಂತಿದ್ದು ಹಬ್ಬದ ನೆಪವೊಡ್ಡಿ ವ್ಯಾಪಾರಸ್ಥರು ಏಕಾಏಕಿ ಬೆಲೆ ಏರಿಸಿ ಸಾರ್ವಜನಿಕರ ಸುಲಿಗೆ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿತ್ತು.