ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಬ್ಬರು ರೈತರ ಮೇಲೆ ಕರಡಿ ದಾಳಿ, ತೀವ್ರ ಗಾಯ

Rashmi Kasaragodu
Updated On : 5 Nov 2013, 11:57 am

ಕ.ಪ್ರ.ವಾರ್ತೆ   ಅರಸೀಕೆರೆ   ನ. 5
ಕರಡಿ ದಾಳಿಯಿಂದ ಮಂಗಳವಾರ ಇಬ್ಬರು ರೈತರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬಾಣಾವರ ಹೋಬಳಿ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಣಾವರ ಹೋಬಳಿ ಚಿಕ್ಕಮ್ಮನಹಳ್ಳಿ ಹೊರವಲಯದ ತೋಟದ ಮನೆಯಲ್ಲಿ ವಾಸವಾಗಿರುವ ಸಿದ್ದಪ್ಪ (80) ಹಾಗೂ ಶಂಕರಲಿಂಗಪ್ಪ (55) ಎಂಬಿಬ್ಬರು ರೈತರ ಮೇಲೆ ಎರಡು ಕರಡಿಗಳು ಏಕಾಎಕಿ ದಾಳಿ ನಡೆಸಿದ್ದು, ಸಿದ್ದಪ್ಪನವರ ಬಲಬದಿಯ ಕುಂಡಿಯನ್ನು ಉಗುರಿನಿಂದ ಕಿತ್ತು ತೀವ್ರವಾಗಿ ಗಾಯಗೊಳಿಸಿದೆ. ಅನಿರೀಕ್ಷಿತ ದಾಳಿಯಿಂದ ನೆಲಕ್ಕೆ ಉರುಳಿದ್ದ ಸಿದ್ದಪ್ಪನವರ ಬಲಗಾಲಿನ ಮೂಳೆ ಮುರಿದಿದೆ.
ಇದೇ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಶಂಕರಲಿಂಗಪ್ಪನ ಮೇಲೆಯೂ ಕರಡಿಯು ದಾಳಿ ಮಾಡಿದ್ದು, ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳವಾರ ಮುಂಜಾನೆ 6 ಗಂಟೆ ಸಮಯದಲ್ಲಿ ತೋಟದ ಮನೆಯಿಂದ ಹೊರಬಂದ ಈ ಇಬ್ಬರೂ ಬಹಿರ್ದೆಶೆಗೆ ಎಂದು ತೋಟದ ಬೇಲಿ ಸಾಲಿಗೆ ಹೋದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಎರಡು ಕರಡಿಗಳು ಏಕಾಎಕಿ ದಾಳಿ ನಡೆಸಿವೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ  ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.  
ತಾಲೂಕಿನ ಸುತ್ತಮುತ್ತಲ್ಲೂ ಅರಣ್ಯ ಪ್ರದೇಶವಿರುವ ಕಾರಣ ಕಾಡು ಪ್ರಾಣಿಗಳು ಬೆಟ್ಟಗುಡ್ಡದ ತಪ್ಪಲಿನ ಗ್ರಾಮಗಳಿಗೆ ಪದೇ ಪದೇ ನುಗ್ಗಿ ಮನುಷ್ಯರು ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಪರಾರಿಯಾಗುತ್ತಿರುವ ಘಟನೆಗಳು ನಡೆಯುತ್ತಿದೆ.
ಅ.22ರಂದು ತಾಲೂಕಿನ ಬಾಣಾವರ ಹೋಬಳಿ ಬ್ಯಾಡರಹಳ್ಳಿ ಸಮೀಪದ ವಡ್ಡರಹಟ್ಟಿಯ ರಾಮಾಬೋವಿ (36) ಎಂಬ ರೈತನ ಮೇಲೆ ಕರಡಿಯು ದಾಳಿ ನಡೆಸಿದ ಪ್ರಕರಣ ಜನಮಾನಸದಲ್ಲಿ ಇನ್ನೂ ಮಾಯಾವಾಗುವ ಮುನ್ನವೇ ಮತ್ತೊಂದು ಕರಡಿ ದಾಳಿಯ ಘಟನೆಯು ಮರುಕಳಿಸಿರುವುದು ಈ ಭಾಗದಲ್ಲಿನ ಗ್ರಾಮಸ್ಥರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಲೂ ಕಾರಣವಾಗಿದೆ.  ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement