ಕಾಡಾನೆ ಸೆರೆ ಕಾರ್ಯಾಚರಣೆಗೆ ಜನವರಿ ಅಂತ್ಯಕ್ಕೆ ಆರಂಭ: ಸಚಿವ ರೈ
ಹಾಸನ: ಮಲೆನಾಡು ಪ್ರದೇಶದಲ್ಲಿ ರೈತರ ಬೆಳೆ, ಆಸ್ತಿ, ಪ್ರಾಣಕ್ಕೆ ಹಾನಿ ಮಾಡುತ್ತಿರುವ 30 ಕಾಡಾನೆಗಳ ಸೆರೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಜನವರಿ ಅಂತ್ಯದೊಳಗೆ ಇವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸುವುದಾಗಿ ಅರಣ್ಯ ಸಚಿವ ರಮನಾಥ ರೈ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಡಿದ ಆನೆಗಳನ್ನು ದುಬಾರೆ, ಸಕ್ಕರೆಬೈಲಿನಲ್ಲಿರುವ ಆನೆ ಶಿಬಿರಗಳಿಗೆ ಸಾಗಿಸಲಾಗುತ್ತದೆ ಎಂದರು.
ಆನೆ ಸಮಸ್ಯೆಗೆ ಕಂದಕಗಳ ನಿರ್ಮಾಣ ಮತ್ತು ಸೋಲಾರ್ ತಂತಿಬೇಲಿ ಹಾಕಲು 30 ಕೋಟಿ ಅನುದಾನ ಮೀಸಲಿಡಲಾಗಿದೆ. ಕೆಲವೆಡೆ ಸೋಲಾರ್ ತಂತಿ ಬೇಲಿ ವಿಫಲವಾಗಿರುವುದರಿಂದ ರೇಲ್ವೆ ಹಳಿಗಳನ್ನು ಬಳಸಿಕೊಂಡು ಫೆನ್ಸಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 100 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದರು. ನಾಗರಹೊಳೆ ಅಭಯಾರಣ್ಯದಲ್ಲಿ ಈಗಾಗಲೇ 71 ಕಿ.ಮೀ. ಕಂದಕ (ಇಪಿಟಿ) ನಿರ್ಮಿಸಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಿದೆ. ಅದೇ ರೀತಿ ಇನ್ನು 41 ಕಿ.ಮೀ. ಕಂದಕವನ್ನು ನಿರ್ಮಿಸಿ ಸೋಲಾರ್ ತಂತಿಬೇಲಿ ಹಾಕಲಾಗುತ್ತದೆ ಎಂದು ಹೇಳಿದರು.