ಕಾರ್ಖಾನೆ ಘಟಕಕ್ಕೆ ಕಿಡಿಗೇಡಿಗಳಿಂದ ಬೆಂಕಿ: 10 ಲಕ್ಷಕ್ಕೂ ಹೆಚ್ಚು ಹಾನಿ
ಚನ್ನರಾಯಪಟ್ಟಣ: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕೃಷಿ ಉದ್ದೇಶಕ್ಕೆ ಬಳಸುವ ಪೈಪ್ ಕಾರ್ಖಾನೆಯ ಘಟಕಕ್ಕೆ ಮಂಗಳವಾರ ರಾತ್ರಿ 4 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಾಕಿದ್ದು, ಒಂದು ಆಪಿ ಆಟೋ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೈಪ್ಗಳು ಬೆಂಕಿಗೆ ಆಹುತಿಯಾಗಿವೆ.
ಆದರ್ಶನಗರದಲ್ಲಿನ ಶ್ರೀರಂಗ ಪಾಲಿಮರ್ ಪೈಪ್ ಕಾರ್ಖಾನೆಯವರು ಪಕ್ಕದ ನಿವೇಶನದಲ್ಲಿ ದಾಸ್ತಾನು ಮಾಡಿದ್ದ ಕೃಷಿಗೆ ಬಳಸುವ ಪೈಪ್ಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಹಿನ್ನೆಲೆಯಲ್ಲಿ 10 ಲಕ್ಷ ರು.ಗಳಿಗೂ ಹೆಚ್ಚು ಹಾನಿಯಾಗಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಆಟೋಗೂ ಬೆಂಕಿ ತಗಲಿ ಆಟೋ ಸಂಪೂರ್ಣ ಸುಟ್ಟುಹೋಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಖಾನೆಗೆ ರಜೆಯಿದ್ದ ಕಾರಣ ಕಾರ್ಖಾನೆ ಮಾಲಿಕರು ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ಕಾರ್ಖಾನೆಯ ಪಕ್ಕದಲ್ಲಿ ಮಾಲಿಕರ ಮನೆಗೆ ಹೊಂದಿಕೊಂಡಂತಿರುವ ನಿವೇಶನದಲ್ಲಿ ದಾಸ್ತಾನು ಮಾಡಿರುವ ಪೈಪ್ಗಳಿಗೆ ಬೆಂಕಿ ಹಾಕಿದ್ದಾರೆ. ಶ್ರೀರಂಗ ಪಾಲಿಮರ್ ಮಾಲಿಕ ಶ್ರೀಪ್ರಿಯ ಪಟ್ಟಣ ಪೊಲಿಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.