ಭೂಮಿ ಫಲವತ್ತತೆ ಕಾಪಾಡಲು ಪಟೇಲ್ ಶಿವರಾಂ ಕರೆ
ಹಾಸನ: ಭೂಮಿ ಚೈತನ್ಯ ಕಳೆದುಕೊಳ್ಳದಂತೆ ನಮ್ಮ ಹಿರಿಯರು ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪುಗಳನ್ನು ಬಳಸಿ ಸತ್ವಭರಿತವಾಗಿರುವಂತೆ ನೋಡಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿಗಾಗಿ ರಸಾಯನಿಕ ಗೊಬ್ಬರ ನಂಬಿ ವ್ಯವಸಾಯ ಮಾಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಭೂಮಿ ಫಲವತ್ತತೆ ಕಡಿಮೆಯಾಗುತ್ತಿದೆ.ಈ ನಿಟ್ಟಿನಲ್ಲಿ ಭೂಮಿ ಫಲವತ್ತತೆ ಕಾಪಾಡಲು ಮುಂದಾಗುವಂತೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕರೆ ನೀಡಿದ್ದಾರೆ.
ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ ವತಿಯಿಂದ ತಾಲೂಕಿನ ಹಾಲುವಾಗಿಲಿನಲ್ಲಿ ಭೂಚೇತನ ಯೋಜನೆಯಡಿ ಏರ್ಪಡಿಸಿದ್ದ ಮುಸುಕಿನಜೋಳ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. ರಾಸುಗಳ ಸಂಖ್ಯೆ ಕಡಿಮೆಯಾಗಿದ್ದು ಕೊಟ್ಟಿಗೆ ಗೊಬ್ಬರ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ವಿದ್ಯಾವಂತ ಯುವಕರು ಕೃಷಿ ಚಟುವಟಿಕೆಗೆ ಕೈಜೋಡಿಸಬೇಕು ಎಂದರು.
ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದು, ವೈಜ್ಞಾನಿಕ ಕೃಷಿ ಪದ್ಧತಿ ಬಳಸಿಕೊಂಡು ಉತ್ತಮ ಬೆಳೆ ಬೆಳೆಯುವಂತೆ ಹಾಗೂ ಬಿತ್ತನೆ ಬೀಜ ಖರೀದಿಸಿದಾಗ ಬಿಲ್ ಪಡೆಯುವಂತೆ ತಿಳಿಸಿದರು. ಬೀಜದ ಗುಣಮಟ್ಟ ಕಳಪೆಯಾಗಿದ್ದು, ಬೆಳೆ ನಷ್ಟವಾದರೆ ಪರಿಹಾರ ಪಡೆಯಲು ಈ ಬಿಲ್ ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಸತ್ಯನಾರಾಯಣ ಮಾತನಾಡಿ, 1965ರಲ್ಲಿ ಆಹಾರದ ಕೊರತೆ ಉಂಟಾದ್ದರಿಂದ ಸ್ವಾಮಿನಾಥನ್ ಆಯೋಗ ವರದಿಯಂತೆ ಹೆಚ್ಚು ಉತ್ಪಾದನೆಗಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಭೂಮಿ ಫಲವತ್ತತೆ ಕಡಿಮೆಯಾಗುತ್ತಿರುವುದರಿಂದ ಲಘು ಪೋಷಕಾಂಶಗಳನ್ನು ಬಳಸಿ ಭೂಮಿಯ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜ್ ಮಾತನಾಡಿ, ರೈತರ ಬೆಳೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಭೂ ಚೇತನ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದಿದೆ ಮಣ್ಣಿನ ಗುಣಧರ್ಮ ಕಂಡುಕೊಂಡು ಪೋಷಕಾಂಶ ಒದಗಿಸಲಾಗುತ್ತಿದೆ. ದೇಶದಲ್ಲಿ ಇಳುವರಿ ಹೆಚ್ಚು ಮಾಡುವ ಅನಿವಾರ್ಯತೆ ಇದೆ. ರಾಜ್ಯದಲ್ಲಿ 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ ಹೊಂದಿದೆ. ಸರ್ಕಾರ ಮಳೆಯಾಶ್ರಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಕೃಷಿ ನೀತಿ ಜಾರಿಗೆ ತರಲು ಚಿಂತಿಸುತ್ತಿದೆ. ಅಲ್ಲದೆ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ದೊರಕಿಸಲು ಸಮಿತಿ ರಚನೆಗೆ ಮುಂದಾಗಿದೆ ಎಂದು ತಿಳಿಸಿದರು. ಜಿಪಂ ಸದಸ್ಯ ಎಂ.ಕೆ.ದ್ಯಾವಪ್ಪ ಹಾಗೂ ಲಕ್ಷ್ಮಣಗೌಡ ಮಾತನಾಡಿದರು. ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಮತ್ತು ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು, ಏಕದಳದ ಜೊತೆಗೆ ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವ ಮೂಲಕ ಭೂಮಿ ಫಲವತ್ತತೆಗೆ ಆಧ್ಯತೆ ನೀಡುವಂತೆ ತಿಳಿಸಿ, ಮುಸುಕಿನ ಜೋಳದ ಜೊತೆಗೆ ಅಂತರ ಬೆಳೆಯಾಗಿ ತೊಗರಿ ಬೆಳೆಯಬಹುದು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್.ನಾಗರಾಜ್ ಮಾತನಾಡಿ, ರೈತರು ಹೊಸ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಾರೆ. ಆದರೆ ತಾಂತ್ರಿಕವಾಗಿ ಬೆಳೆ ಬೆಳೆಯಲು ಅಳವಡಿಸಿಕೊಳ್ಳದೆ ರೋಗ ಬಾದೆಗಳು ಕಾಡುತ್ತವೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎ.ಎಸ್.ಕೋಕಿಲ ಮಾತನಾಡಿ, ಭೂಚೇತನ ಯೋಜನೆಯಡಿ ಜಿಲ್ಲೆಯಲ್ಲಿ 4500 ರೈತರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಡಿ 52 ಗುಚ್ಛ ಗ್ರಾಮ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷತೆ ಹೇಮ, ಉಪಾಧ್ಯಕ್ಷ ರಂಗಸ್ವಾಮಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣೇಗೌಡ ಮತ್ತಿತರರು ಇದ್ದರು.