ಮ. 2.06ಕ್ಕೆ ಶಾಸ್ತ್ರೋಕ್ತ ತೆರೆ
ಕನ್ನಡಪ್ರಭ ವಾರ್ತೆ ಹಾಸನ ನ. 5
ಕಳೆದ ಹದಿಮೂರು ದಿನಗಳಿಂದ ತೆರೆಯಲಾಗಿದ್ದ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದೇವಾಲಯದ ಬಾಗಿಲನ್ನು ಮಂಗಳವಾರ ಮಧ್ಯಾಹ್ನ 2.06ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಕಡೆ ದಿನವಾದ್ದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಅಧಿಕವಾಗಿತ್ತು. ಇದರಿಂದ ನೂಕು ನುಗ್ಗಲು ಉಂಟಾಗಿ, ದೇವಿ ದರ್ಶನಕ್ಕೆ ಭಕ್ತರು ಪ್ರಯಾಸ ಪಡಬೇಕಾಯಿತು.
ಅ.24ರಂದು ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಅರಸು ವಂಶಸ್ಥರು ಬನ್ನಿ ಕಡಿದ ನಂತರ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಗರ್ಭಗುಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ದೇವಿ ಮುಂಭಾಗ ಹಚ್ಚಿದ್ದ ದೀಪ ಹಾಗೆಯೇ ಪ್ರಜ್ವಲಿಸುತ್ತಿತ್ತು. ಹೂ ಬಾಡಿರಲಿಲ್ಲ, ದೇವಿಗೆ ಇಟ್ಟಿದ್ದ ಎಡೆಯೂ ಲೋಪವಾಗದೆ ಇದ್ದದ್ದು, ದೇವಿಯ ಮಹಿಮೆಯನ್ನು ಸಾಕ್ಷೀಕರಿಸಿತ್ತು.
ಅದರಂತೆ ಮಂಗಳವಾರ ದೇವಿಗೆ ತೊಡಿಸಿದ ವಸ್ತ್ರಾಭರಣಗಳನ್ನು ತೆಗೆದು ದೇವಾಲಯದ ಬಾಗಿಲು ತೆರೆದ ದಿನ ಯಾವ ರೀತಿ ಇತ್ತು ಅದೇ ರೀತಿಯಲ್ಲಿ ದೇವಿಯನ್ನು ಇರಿಸಿ ಮಧ್ಯಾಹ್ನ 2.06ಕ್ಕೆ ಸರಿಯಾಗಿ ಶಾಸ್ತ್ರೋಕ್ತವಾಗಿ ಶಾಸಕ ಎಚ್.ಎಸ್.ಪ್ರಕಾಶ್, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಇತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು.
ಲಕ್ಷಾಂತರ ಭಕ್ತರಿಂದ ವೀಕ್ಷಣೆ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆಯ ದರ್ಶನವನ್ನು ಸುಮಾರು 5ರಿಂದ 8 ಲಕ್ಷ ಭಕ್ತರು ಪಡೆದಿದ್ದಾರೆ. ದೇವಿ ದರ್ಶನ ಭಾಗ್ಯ ಪಡೆಯಲು ಕಳೆದ 13 ದಿನಗಳಿಂದ ಸಹಸ್ರಾರು ಭಕ್ತ ಸಾಗರವೇ ಹರಿದು ಬಂದಿತು. ಹಾಸನಾಂಬ ದೇವಿಯ ದರ್ಶನಕ್ಕೆ ಮಂಗಳವಾರ ಕಡೇ ದಿನವಾಗಿದ್ದರಿಂದ ಭಕ್ತರು ದೇವಿಯ ದರ್ಶನ ಪಡೆಯಲು ಮುಂದಾಗಿದ್ದರು.
13 ದಿನಗಳ ಪರ್ಯಂತ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ದೇವಿ, ಮುಂದಿನ ವರ್ಷದವರೆಗೆ ಗರ್ಭಗುಡಿ ಯೊಳಗೆ ನೆಲೆಗೊಳ್ಳಲಿದ್ದಾಳೆ. ಈ ಬಾರಿ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ಅ.24 ರಂದು ಆಶ್ವೀಜಮಾಸದ ಮೊದಲ ಗುರುವಾರದಿಂದ ಇಂದಿನ ವರೆಗೆ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆಯ ಬಾಗಿಲನ್ನು ಪಂಜಿನ ಆರತಿ ನಂತರ ಮಂಗಳವಾರ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.
ಹೊರ ಜಿಲ್ಲೆಗಳಿಂದಲೂ ಆಗಮನ: ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ತುಮಕೂರು, ಮಂಡ್ಯ, ಚಾಮರಾಜನಗರ, ಚನ್ನೈ, ಊಟಿ ಹಾಗೂ ಗೋವಾ ರಾಜ್ಯಗಳಿಂದಲೂ ಭಕ್ತರು ಹಾಸನಾಂಬೆ ದರ್ಶನಕ್ಕೆ ಬಂದ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನಸಂದಣಿ ಈ ಬಾರಿ ಕಂಡು ಬಂದಿತು. ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಭಕ್ತರು ಹೆಂಗಸರು, ಮಕ್ಕಳು ಹಾಗೂ ವೃದ್ಧರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ನಡುವೆ ಆಗಾಗ್ಗೆ ಬರುತ್ತಿದ್ದ ಗಣ್ಯರು ಅತಿಗಣ್ಯರಿಂದಾಗಿ ಸಾಮಾನ್ಯ ಭಕ್ತರಿಗೆ ದರ್ಶನ ಕೆಲ ಸಮಯ ಸ್ಥಗಿತ ಗೊಳಿಸುತ್ತಿದ್ದದು ಸಹ ದರ್ಶನ ವಿಳಂಬವಾಗಲು ಕಾರಣವಾಗಿತ್ತು.
ಹುಂಡಿ ಸಂಗ್ರಹ 25 ಲಕ್ಷಕ್ಕೂ ಹೆಚ್ಚು: ದೇವಾಲಯದ ಆವರಣದಲ್ಲಿ ಇಟ್ಟಿದ್ದ ಹುಂಡಿಯಲ್ಲಿ ಸುಮಾರು 25 ಲಕ್ಷ ರು. ಗಳಿಗೂ ಹೆಚ್ಚು ಹಣವನ್ನು ಭಕ್ತರು ಅರ್ಪಿಸಿರುವ ಸಾಧ್ಯತೆ ಇದ್ದು, ನಾಳೆ ಪೂರ್ಣ ಮಾಹಿತಿ ಗೊತ್ತಾಗಲಿದೆ.
ಶಾಸಕ ಪ್ರಕಾಶ್, ಜಿಲ್ಲಾಧಿಕಾರಿ ಕೃತಜ್ಞತೆ: ಕಳೆದ 13 ದಿನಗಳಿಂದ ದೇವಿ ದರ್ಶನ ಯಶಸ್ವಿಯಾಗಿದ್ದು, ಇದಕ್ಕೆ ಸಹಕರಿಸಿದ ಎಲ್ಲ ಭಕ್ತರಿಗೂ, ಜಿಲ್ಲಾಡಳಿತ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಹೇಳಿರುವ ಶಾಸಕ ಪ್ರಕಾಶ್, ಈ ಬಾರಿ ಸಣ್ಣಪುಟ್ಟ ಲೋಪದೋಷಗಳು ಆಗಿರಬಹುದು. ಆದರೆ ಮುಂದಿನ ವರ್ಷ ಇಂಥ ಎಲ್ಲಾ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಹಿಂದೆ ಸಣ್ಣಪುಟ್ಟ ತಾಂತ್ರಿಕ ದೋಷಗಳು ಉಂಟಾಗಿದ್ದು, ಈಗ ಕೆಲಸಗಳು ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ದೇವಾಲಯ ಸುತ್ತಲು ಇರುವ ಮನೆಗಳನ್ನು ದೇವಾಲಯಕ್ಕೆ ವಶಪಡಿಸಿಕೊಳ್ಳುವ ಮತ್ತು ಅವರಿಗೆ ಪರಿಹಾರ ನೀಡುವ ಬಗ್ಗೆ ನಗರಸಭೆಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಕ್ರಮಗಳನ್ನು ಕೈಗೊಂಡು ಮುಂದಿನ ವರ್ಷ ದೇವಿಯ ದರ್ಶನದೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲು ಶ್ರಮಿಸಿವುದಾಗಿ ತಿಳಿಸಿದರು.
ಈ 13 ದಿನಗಳಲ್ಲಿ ಸುಮಾರು 4ರಿಂದ 5 ಲಕ್ಷ ಮಂದಿ ದೇವಿ ದರ್ಶನ ಪಡೆದಿರಬಹುದೆಂದು ಅಂದಾಜಿಲಾಗಿದೆ. ಟಿಕೆಟ್ ಮಾರಾಟದಿಂದ ಸುಮಾರು 40 ಲಕ್ಷ ರು, ಲಾಡು ಮತ್ತು ಸೀರೆ ವಿತರಣೆಯಿಂದ ಲಕ್ಷಾಂತರ ರು. ಬಂದಿದೆ. ಉಳಿದಂತೆ 30 ಹುಂಡಿಗಳನ್ನು ಇಡಲಾಗಿದ್ದು, ಅದರ ಎಣಿಗೆ ಕಾರ್ಯ ನಡೆಸಬೇಕಾಗಿದೆ. ಒಂದು ಕೋಟಿ ರು.ಅಧಿಕ ಆದಾಯ ದಾಟಿದರೆ ಈ ದೇವಾಲಯ ಎ. ಗ್ರೇಡ್ ದೇವಾಲಯದ ಸಾಲಿಗೆ ಸೇರಲಿದೆ ಎಂದ ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರು, ದೇವಿ ದರ್ಶನಕ್ಕೆ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಭಕ್ತಾಧಿಗಳಿಗೆ ಧನ್ಯವಾದ ಸಲ್ಲಿಸಿದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ಗೋಪಾಲಕೃಷ್ಣ ತಹಸೀಲ್ದಾರ್ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಇತರರು ಇದ್ದರು.