'ಜಿಲ್ಲೆಯಲ್ಲಿ 706 ಪುರುಷ ಸಲಿಂಗಕಾಮಿಗಳು'
ಹಾಸನ: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಪ್ರಾಯೋಜಕತ್ವದಲ್ಲಿ ಜಿಲ್ಲೆಯಲ್ಲಿ 706 ಪುರುಷ ಸಲಿಂಗಕಾಮಿಗಳನ್ನು ಗುರುತಿಸಿದೆ.
ಅವರಲ್ಲಿ ಎಚ್ಐವಿಯ ಏಡ್ಸ್ ನಿಯಂತ್ರಿಸುವ ಗುರಿಯೊಂದಿಗೆ, ಟಿಐ(ಟಾರ್ಗೆಟೆಡ್ ಇಂಟರ್ವೆನ್ಷನ್) ಎಂಎಸ್ಎಂ (ಪುರುಷ ಸಲಿಂಗ ಕಾಮಿಗಳು) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಪುರುಷ ಸಲಿಂಗಕಾಮಿಗಳಲ್ಲಿ ಎಚ್ಐವಿ, ಏಡ್ಸ್ ನಿಯಂತ್ರಣ ಮತ್ತು ಸುರಕ್ಷಿತ ಲೈಂಗಿಕತೆ ಬಗ್ಗೆ ಮಾಹಿತಿಯನ್ನು ಸಲಿಂಗಕಾಮಿಗಳಿಗೆ ತಲುಪಿಸಲು, ಅವರ ಸಮುದಾಯದಿಂದಲೇ ಸಹವರ್ತಿ ಶಿಕ್ಷಕರನ್ನು ಗುರುತಿಸಿ, ಅವರಿಗೆ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನೀಡಿ ಗೌರವಧನ ನೀಡಲಾಗುತ್ತಿದೆ ಎಂದು ಯೂತ್ ಮೂವ್ಮೆಂಟ್ ಯೋಜನಾ ನಿರ್ದೇಶಕ ಡಾ. ಸುಧೀರ್ ಬಿ.ಬೆಂಗಳೂರ ತಿಳಿಸಿದ್ದಾರೆ.
ಸ್ಪಷ್ಟನೆ: ಇತ್ತೀಚೆಗೆ ಹಾಸನದಲ್ಲಿ ಬಂಧಿತ ಸಲಿಂಗಕಾಮಿಗಳು ಎನ್ನಲಾದವರಲ್ಲಿ ಫಾಜಿಲ್ ಮತ್ತು ರೇವಣ್ಣ ಎಂಬವರು ಮಾತ್ರ ಸಹವರ್ತಿ ಶಿಕ್ಷಕರಾಗಿ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯೂ ತಮ್ಮ ಸಂಸ್ಥೆಯ ಸಿಬ್ಬಂದಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ವ್ಯಕ್ತಿಯನ್ನು ಹಣಕ್ಕಾಗಿ ಅಥವಾ ಇತರೆ ಆಮಿಷಕ್ಕಾಗಿ, ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ಅಥವಾ ಲೈಂಗಿಕ ಕಿರುಕುಳ ಕೊಡುವುದನ್ನು ಸಂಸ್ಥೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಸಂಸ್ಥೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತವಾಗಿರುವ ವ್ಯಕ್ತಿಗಳು ಯಾರೇ ಆದರೂ ಅವರನ್ನು ಕಾನೂನು ಚೌಕಟ್ಟಿನಲ್ಲಿ ಒಳಪಡಿಸುವಂತೆ ಸಂಸ್ಥೆ ವಕಾಲತ್ತು ವಹಿಸುತ್ತದೆ ಎಂದು ತಿಳಿಸಿದ್ದಾರೆ.