ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಾಣಿಗಳ ಆವಾಸಸ್ಥಾನ ಉಳಿಸಿ: ರಮಾನಾಥ ರೈ

Rashmi Kasaragodu
Updated On : 6 Nov 2013, 11:33 am

ಹಾಸನ: ಪ್ರಾಣಿಗಳು ಇರುವ ಸ್ಥಳದಲ್ಲಿ ಮನುಷ್ಯ ವಾಸ ಮಾಡುತ್ತಿರುವುದರಿಂದ ಪ್ರಾಣಿಗಳು ಬರುತ್ತಿವೆ ಎಂದು ಅರಣ್ಯ ಸಚಿವ ರಮಾನಾಥ್ ರೈ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಹಾಸನ ಅರಣ್ಯ ವೃತ್ತದ ಅರಣ್ಯ ವಿಭಾಗಗಳ ಆಯ್ದ ಫಲಾನುಭವಿಗಳಿಗೆ ಸರ್ಕಾರದ ನಾನಾ ಯೋಜನೆಗಳಡಿಯಲ್ಲಿ ಸವಲತ್ತು ವಿತರಣೆ ಹಾಗೂ ಆನೆ ದಾಳಿಯಿಂದ ಮಡಿದ ಕುಟುಂಬಕ್ಕೆ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಆನೆ, ಹುಲಿಗಳು ಇಲ್ಲಿಯೇ: ಅತ್ಯಂತ ಹೆಚ್ಚು ಆನೆ ಮತ್ತು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಮನುಷ್ಯ ಬದುಕಲು ಸಾಕಷ್ಟು ಜಾಗವಿದೆ. ಆದರೆ ಪ್ರಾಣಿಗಳು ನಿರ್ದಿಷ್ಟ ಪ್ರದೇಶದಲ್ಲಿಯೇ ವಾಸಿಸಬೇಕು. ಜಿಲ್ಲೆಯಲ್ಲಿ ಆನೆಗಳ ಹಾವಳಿಯಿಂದಾಗಿ ಸಾಕಷ್ಟು ಸಾವು -ನೋವು ಸಂಭವಿಸಿದ್ದು, ಬೆಳೆ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಆನೆ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಅರಣ್ಯ, ವನ್ಯಜೀವಿ ಮತ್ತು ಪಕ್ಷಿ ಸಂಕುಲ ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಯಾವಾಗಲೂ ಅರಣ್ಯ ಇಲಾಖೆಯು ಜನಸ್ನೇಹಿ ಇಲಾಖೆ ಆಗಬೇಕು ಎಂದರು.
ವನ್ಯಜೀವಿ ಸಂರಕ್ಷಣೆ ಮಾಡಬೇಕು. ಆನೆ ಹಾವಳಿ ಆನೇಕ ವರ್ಷಗಳಿಂದ ಕಂಡು ಬರುತ್ತಿದೆ. ಕಾಡು ಅರಣ್ಯ, ಪ್ರಾಣಿ ಸಂಕುಲನ ಹಾಗೂ ಪರಿಸರ ಉಳಿಸಬೇಕು ಎಂಬುದು ಜನರ ಭಾವನೆ ಆಗಿದೆ. ದಟ್ಟವಾದ ಕಾಡು ಪ್ರದೇಶವನ್ನು ಉಳಿಸಿ ಪಕ್ಷಿ ಸಂಕುಲನ ಕಾಪಾಡಬೇಕು ಎಂದರು.
ಅರಣ್ಯ ಇಲಾಖೆಯು ಮರ ಕಡಿಯಲು ಮತ್ತು ಪ್ರಾಣಿಗಳನ್ನು ಶಿಕಾರಿ ಮಾಡಲು ಅನುಮತಿ ಕೊಡುವುದಿಲ್ಲ. ಅರಣ್ಯ ಉಳಿವಿಗಾಗಿ ಅರಣ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಸ್ವಾರ್ಥಪರ ಕೆಲಸ ಬಿಟ್ಟು ಅರಣ್ಯ ಉಳಿವಿಗಾಗಿ ಶ್ರಮಿಸಿ. ಕೃಷಿ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ವನ್ಯ ಜೀವಿ ಉಪ ವಿಭಾಗ ಮಾಡಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು.
ಅರಣ್ಯದ ಮೇಲೆ ಒತ್ತಡ ಆಗಬಾರದು. ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಕೆಲವು ಸಮಸ್ಯೆಗಳಿವೆ. ಇವನ್ನು ಜಂಟಿ ಸರ್ವೆ ಮಾಡಿಸಿ ಡಿಮಾರ್ಕೇಷನ್ ಮಾಡಲಾಗುವುದು. ಹೊಸ ಜಲ ವಿದ್ಯುತ್ ಘಟಕ ಪ್ರಾರಂಭ ಮಾಡಲು ಸಮ್ಮತಿ ನೀಡುವುದಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಶಾಸಕರಾದ ಎಚ್.ಎಸ್.ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ವೈ.ಎನ್.ರುದ್ರೇಶಗೌಡ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು) ದೀಪಕ್ ಶರ್ಮ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸೆಲ್ವಕುಮಾರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ ಮೈಸೂರು) ಉದಯಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್ ಇದ್ದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ.ರಂಗರಾವ್ ಸ್ವಾಗತಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎನ್.ಲಕ್ಷ್ಮಣ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement