ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೊಲ ಸಾಕಾಣಿಕೆ-ಆದಾಯಕ್ಕೆ ದಾರಿ

Rashmi Kasaragodu
Updated On : 6 Nov 2013, 11:33 am

ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಓದಿದೋರಿಗೆಲ್ಲಾ ಸರ್ಕಾರಿ ಕೆಲಸಾನೇ ಸಿಗಬೇಕು ಅನ್ನೋದು ಇಂದಿನ ದಿನಗಳಲ್ಲಿ ಅಷ್ಟು ಸುಲಭದ ಮಾತಲ್ಲ. ಆದರೆ ಓದಿನೊಂದಿಗೆ ತಮ್ಮ ಆದಾಯಕ್ಕೆ ತಾವೇ ಒಂದು ದಾರಿ ಹುಡುಕಿಕೊಂಡರೆ ಹೇಗೆ ಎಂಬ ಪ್ರಶ್ನೆಗೆ ಪಟ್ಟಣದಲ್ಲಿನ ಯುವಕರಿಬ್ಬರು ಕಂಡುಕೊಂಡಿದ್ದು, ಮುದ್ದಾಗಿ ಕಾಣುವ ಜೊತೆಗೆ ಆದಾಯವನ್ನೂ ತರಬಲ್ಲ ಮೊಲದ ಸಾಕಾಣಿಕೆ.
ಇತ್ತೀಚಿನ ದಿನಗಳಲ್ಲಿ ಮೊಲದ ಮಾಂಸಕ್ಕೂ ಬಹಳಷ್ಟು ಬೇಡಿಕೆಯಿದ್ದು, ಕುರಿ, ಕೋಳಿ, ಮೀನು ಮತ್ತು ಹೈನುಗಾರಿಕೆಗಳಂತೆಯೇ ವ್ಯವಸ್ಥಿತವಾಗಿ ಹಾಗೂ ಲೆಕ್ಕಾಚಾರದೊಂದಿಗೆ ಕೈಗೊಂಡರೆ, ಮೊಲ ಸಾಕಾಣಿಕೆಯೂ ಸಾಕಷ್ಟು ಆದಾಯವನ್ನು ತರಬಲ್ಲದು ಎಂಬುದನ್ನು ಮನಗಂಡ ಇಲ್ಲಿನ ಅಮಿತ್ ಹಾಗೂ ಯೋಗಾನರಸಿಂಹ ಎಂಬ ಇಬ್ಬರು ಯುವಕರು ಪಟ್ಟಣದಾಚೆಗಿನ ತೋಟದ ಮನೆಯೊಂದರಲ್ಲಿ ಮೊಲಗಳನ್ನು ಸಾಕಿ ಮಾರುವ ಯೋಜನೆಗೆ ಮುಂದಾಗಿ ಸಣ್ಣದಾಗಿ ಮೊಲ ಸಾಕಾಣಿಕೆಯನ್ನು ಸದ್ದಿಲ್ಲದೇ ಕೈಗೊಂಡಿದ್ದಾರೆ.
ತಮ್ಮ ಬಳಿಯಿದ್ದ ಅಲ್ಪ ಸ್ವಲ್ಪ ಹಣವನ್ನೇ ಒಟ್ಟುಗೂಡಿಸಿ ಸುಮಾರು 50ಸಾವಿರ ರು.ಗಳಲ್ಲಿ ಮೊಲದ ಸಾಕಾಣಿಕೆಗೆ ಮುಂದಾದ ಯುವಕರು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ವ್ಯಕ್ತಿಯೊಬ್ಬರು ಮೊಲದ ಸಾಕಾಣಿಕೆ ಮಾಡುತ್ತಿರುವ ವಿಷಯ ತಿಳಿದು, ಅಲ್ಲಿಗೆ ತೆರಳಿ ಅವರಿಂದಲೂ ಸಾಕಷ್ಟು ಮಾಹಿತಿ ಪಡೆದು ಅವರಿಂದಲೇ ಆರಂಭಿಕವಾಗಿ 10 ಗಂಡು ಹಾಗೂ 35ಹೆಣ್ಣು ಮೊಲದ ಮರಿಗಳನ್ನು ತಂದು ಇಲ್ಲಿ ಸಾಕತೊಡಗಿದ್ದಾರೆ. ಇದಕ್ಕಾಗಿಯೇ ಪಟ್ಟಣದ ಹೊರವಲಯದಲ್ಲಿನ ತೋಟದ ಮನೆಯ ಶೆಡ್ ಬಾಡಿಗೆಗೆ ಪಡೆದು, ವ್ಯವಸ್ಥಿತವಾಗಿ ಮೊಲ ಸಾಕಾಣಿಕೆಯನ್ನು ಕೈಗೊಂಡಿದ್ದಾರೆ.
ಮೊಲಗಳಿಗೆ ಪ್ರತಿನಿತ್ಯವೂ ಸೂಕ್ತ ಆರೈಕೆ ಹಾಗೂ ಪೋಷಣೆಗಾಗಿ ಕನಿಷ್ಠ 100 ರಿಂದ 150 ರು.ಗಳನ್ನು ಖರ್ಚು ಮಾಡಿ ಬೆಳಿಗ್ಗೆ ಸಂಜೆ ಮೊಲದ ಆಹಾರವನ್ನು ಬೆಂಗಳೂರು ಹಾಗೂ ಮೈಸೂರಿನಿಂದ ತರಿಸಿ ಅವುಗಳ ಜೊತೆಗೆ ಗೋದಿ ಮತ್ತು ರವೆ ಬೂಸಾವನ್ನು ನೀಡುತ್ತಾರೆ. ಜೊತೆಗೆ ಪಟ್ಟಣದಲ್ಲಿ ಚೆನ್ನಾಗಿ ದೊರೆಯುವ ಹಸಿರೆಲೆ ಸೊಪ್ಪು ಹಾಗೂ ತರಕಾರಿಗಳನ್ನೂ ತಂದು ಹಾಕುತ್ತಿದ್ದಾರೆ. ಇದಕ್ಕಾಗಿಯೇ ಸ್ನೇಹಿತನೊಬ್ಬನನ್ನು ಉಸ್ತುವಾರಿಗಾಗಿ ನೇಮಿಸಿಕೊಂಡಿದ್ದು, ಆತ ಮೊಲಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀರು ಹಾಗೂ ಆರೋಗ್ಯದ ಕುರಿತು  ನಿಗಾ ವಹಿಸುತ್ತಿದ್ದಾನೆ.
ಅಮಿತ್ ಹಾಗೂ ಯೋಗಾನರಸಿಂಹ ಇವರು ಎರಡು ತಿಂಗಳ ಹಿಂದಷ್ಟೇ ತಂದಿರುವ ಸುಮಾರು 40 ಮೊಲಗಳು ಈಗಾಗಲೇ 3ಕೆ.ಜಿಗಿಂತಲೂ ಹೆಚ್ಚಿನ ತೂಕದ್ದಾಗಿದ್ದು, ತಮ್ಮ ಸಾಕಾಣಿಕೆ ಕೇಂದ್ರದಲ್ಲಿರುವ ಹೆಣ್ಣು ಮತ್ತು ಗಂಡು ಮೊಲಗಳನ್ನು ಮೊದಲ ಬಾರಿಗೆ ಸಂತಾನೋತ್ಪತ್ತಿಗೆ ಬಿಡಬೇಕಿದೆ. ಸಂತಾನೋತ್ಪತ್ತಿಗೆ ಸಿದ್ದವಾದ ಮೊಲಗಳು ಪ್ರತಿ ಮೂರು ತಿಂಗಳಿಗೊಮ್ಮೆ ಮರಿಗಳನ್ನು ಹಾಕುತ್ತವೆ.
ಪ್ರತಿ ಮೊಲವು ಪ್ರತಿ ಬಾರಿ ಏನಿಲ್ಲವೆಂದರೂ 6ರಿಂದ 8 ಮರಿಗಳನ್ನು ಹಾಕುತ್ತದೆ. ಹೀಗಾದಲ್ಲಿ ಮುಂದಿನ ಮೂರು ತಿಂಗಳಿಗೆ ಈ ಯುವಕರ ಬಳಿ ಇರುವ ಮೊಲಗಳ ಸಂಖ್ಯೆ ಏಕಾಏಕಿ ನಾಲ್ಕೈದು ಪಟ್ಟು ಹೆಚ್ಚಾಗುತ್ತದೆ. ನಂತರದಲ್ಲಿ ಈ ಮೊಲಗಳೂ ಸಂತಾನೋತ್ಪತ್ತಿಗೆ ಬಂದ ನಂತರ ಅವುಗಳು ಮತ್ತೆ ಮರಿಗಳನ್ನು ಹಾಕಿದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಮೊಲದ ಮರಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ.
ಈ ರೀತಿಯಲ್ಲಿ ಕಾಲಾನುಕಾಲಕ್ಕೆ ಸಮರ್ಪಕವಾಗಿ ನಿಗಾವಹಿಸಿ ಮೊಲ ಸಾಕಾಣಿಕೆ ಕೈಗೊಂಡಲ್ಲಿ ಮೊಲಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುವ ಜೊತೆಗೆ ಮಾಂಸಕ್ಕಾಗಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇರುವ ಬೇಡಿಕೆಯನ್ನು ಗಮನಿಸಿ ಅಲ್ಲಿಗೆ ಮಾಂಸಕ್ಕಾಗಿ ಮೊಲಗಳನ್ನು ಸರಬರಾಜು ಮಾಡುವ ಯೋಜನೆ ಈ ಯುವಕರದ್ದಾಗಿದೆ.
ಹೀಗೆ ಮೊಲದ ಸಾಕಾಣಿಕೆಯನ್ನು ವ್ಯವಸ್ಥಿತವಾಗಿ ತಜ್ಞರ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಕೈಗೊಂಡಲ್ಲಿ, ಎಲ್ಲಾ ಖರ್ಚು ಕಳೆದು ವರ್ಷಕ್ಕೆ ಏನಿಲ್ಲವೆಂದರೂ ಮೂರ್ನಾಲ್ಕು ಲಕ್ಷ ರು. ಸಂಪಾದಿಸುವ ಯೋಜನೆ ಅಮಿತ್ ಹಾಗೂ ಯೋಗನರಸಿಂಹ ಅವರದ್ದಾಗಿದೆ.
ಸದ್ದಿಲ್ಲದೆ ತಮ್ಮ ಆದಾಯದ ಮೂಲವನ್ನಾಗಿ ಮೊಲ ಸಾಕಾಣಿಕೆಗೆ ಮುಂದಾಗಿರುವ ಈ ಯುವಕರು, ಎಬಿವಿಪಿ ಪದಾಧಿಕಾರಿಗಳಾಗಿ ಜಿಲ್ಲೆಯ ವಿದ್ಯಾರ್ಥಿಗಳ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಜನ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಖರ್ಚಿಗೆ ಮನೆಯವರನ್ನು ಗೋಳು ಹೊಯ್ದುಕೊಳ್ಳುವ ಕಾರ್ಯಕ್ಕೆ ಮುಂದಾಗದೆ, ಮೊಲ ಸಾಕಣಿಕೆ ಮೂಲಕ ತಮ್ಮ ಆದಾಯದ ಮೂಲವನ್ನು ತಾವೇ ರೂಪಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement