ಶಾದಿ ಭಾಗ್ಯ ಯೋಜನೆ ವಿಸ್ತರಿಸಿ
ಹಾಸನ: ರಾಜ್ಯ ಸರ್ಕಾರ ಸಮಾಜವನ್ನು ಒಡೆದು ಆಳುವ ಕೊಳಕುತನ ಬಿಟ್ಟು ಎಲ್ಲ ವರ್ಗ ಮತ್ತು ಸಮುದಾಯಗಳಿಗೆ ಶಾದಿ ಭಾಗ್ಯ ಯೋಜನೆ ವಿಸ್ತರಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಆಶ್ರಯದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಎನ್.ಆರ್.ವೃತ್ತ ಬಿಜೆಪಿ ಕಚೇರಿ ಬಳಿಯಿಂದ ಹೊರಟ ಮೆರವಣಿಗೆ ಕಸ್ತೂರಿ ಬಾ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ಇತ್ತೀಚೆಗೆ ಒಂದು ವರ್ಗದ ಮತೀಯ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿ ಶಾದಿ ಭಾಗ್ಯ ಯೋಜನೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿ 50 ಸಾವಿರ ಧನಸಹಾಯ ನೀಡಲು ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ದೂರಿದರು.
ಸಮಾಜದ ಎಲ್ಲ ಧರ್ಮ, ಜಾತಿ, ಸಮುದಾಯಗಳಲ್ಲೂ ತಮ್ಮ ತಮ್ಮ ಸಂಪ್ರದಾಯದ ರೀತಿ ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಆರ್ಥಿಕ ಶಕ್ತಿ ಇಲ್ಲದೆ ಸಾಮಾಜಿಕ ನಿಂದನೆಗೆ ಒಳಗಾಗಿ ಹುಟ್ಟಿದ ಸ್ಥಳವನ್ನೇ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಉಳಿದವರು ತಮ್ಮ ಅಲ್ಪಸ್ವಲ್ಪ ಆಸ್ತಿಯನ್ನು ಹೆಣ್ಣು ಮಕ್ಕಳ ಮದುವೆ ಮಾಡುವ ಉದ್ದೇಶದಿಂದ ಮಾರಾಟ ಮಾಡಿ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
ಹೆಣ್ಣು ಎಂದು ತಿಳಿದ ಕೂಡಲೇ ಭ್ರೂಣಹತ್ಯೆ ಮಾಡುವ ಅನೇಕ ಘಟನೆಗಳು ನಡೆದಿದೆ. ಈ ಅನಿಷ್ಠವನ್ನು ದೂರ ಮಾಡುವ ದೃಷ್ಟಿಯಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ಸಮಾಜದ ಎಲ್ಲ ಧರ್ಮ, ಜಾತಿ, ಸಮುದಾಯಗಳಿಗೆ ಅನ್ವಯವಾಗುವಂತೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಯಿತು. ಆದರೆ ಈಗ ಒಂದು ವರ್ಗದ ಮತೀಯ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿರುವುದನ್ನು ಖಂಡಿಸಿದರು. ಮತಬೇಟೆಗಾಗಿ ಒಂದು ಸಮುದಾಯವನ್ನು ಓಲೈಸುವ ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದವರಿಗೆ ಶಾದಿ ಭಾಗ್ಯ ವಿಸ್ತರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಶೀಲ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎ. ಭಾಗ್ಯಲಕ್ಷ್ಮಿ, ವೆಂಕಟಮ್ಮ, ಪ್ರೇಮ, ಬೋರಮ್ಮ, ಮಂಜುಳ, ಲತಾ, ಸುಚಿತ್ರ, ನಾಗಮ್ಮ, ಸುಂದರಮ್ಮ ಇದ್ದರು.