ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ಅರಸೀಕೆರೆ: ಶಾಲಾ ವಾಹನಕ್ಕೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿಯ ಸವಾರ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಬಾಣಾವರ ಸಮೀಪ ಸಾಲಾಪುರ ಗೇಟ್ ಬಳಿ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಬಿಸಲೇಹಳ್ಳಿ ನಿವಾಸಿ ರುದ್ರೇಶ್(25) ಮೃತಪಟ್ಟವರು. ಗಾಯಗೊಂಡ ಲೋಹಿತ್ ಬಿಸಲೇಹಳ್ಳಿಯವರಾಗಿದ್ದು, ಅರುಣ್ಕುಮಾರ್ ಜಾವಗಲ್ ಹೋಬಳಿ ಕಾಮೇನಹಳ್ಳಿಯವರು. ಅವರು ಬೆಂಗಳೂರಿನ ಗಾರ್ಮೆಂಟ್ನಲ್ಲಿ ನೌಕರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ದೀಪಾವಳಿಗಾಗಿ ಬಿಸಲೇಹಳ್ಳಿಗೆ ಬಂದ ಇವರು, ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಬಾಣಾವರದ ವಿದ್ಯಾನಿಕೇತನ ಶಾಲೆಯ ಮಕ್ಕಳನ್ನು ಬಿಟ್ಟು ವಾಪಸ್ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ತಕ್ಷಣವೇ ಪಟ್ಟಣದ ಜೆ.ಸಿ.ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ. ಬಾಣಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ
ಆಲೂರು: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಣತೂರು ಗ್ರಾಮದ ಕಾಲೋನಿಯಲ್ಲಿ ನಡೆದಿದೆ. ಗ್ರಾಮದ ಸಿದ್ದ (40) ಮೃತವ್ಯಕ್ತಿ. ಈತನಿಗೆ ಮಾವನ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಇದನ್ನು ಸಹಿಸದೆ ಶುಂಠಿ ಬೆಳೆಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ. ಈ ಬಗ್ಗೆ ಮೃತನ ತಾಯಿ ಸಿದ್ದಮ್ಮ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಕಳ್ಳರ ಬಂಧನ
ಚನ್ನರಾಯಪಟ್ಟಣ: ತಿಪಟೂರು ತಾಲೂಕು ಕರಡಿ ಗ್ರಾಮದಿಂದ 4 ಲಕ್ಷದ ಸ್ವರಾಜ್ ಟ್ರಾಕ್ಟರ್ ಅನ್ನು ಒಂದೂವರೆ ವರ್ಷದ ಹಿಂದೆ ಕಳ್ಳತನ ಮಾಡಿದ್ದ ಕಾವಲು ಹೊಸೂರು ಗ್ರಾಮದ ಕುಮಾರ ಮತ್ತು ಶಿವರಾಜು ಎಂಬವರನ್ನು ನುಗ್ಗೇಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕೆ.ಜಗದೀಶ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವ್ಯಕ್ತಿ ನಾಪತ್ತೆ
ಹಾಸನ: ತಾಲೂಕಿನ ಎತ್ತಿನಕಟ್ಟೆ ಗ್ರಾಮದ ರಾಜೇಗೌಡ(30) ಎಂಬವರು 6 ತಿಂಗಳ ಹಿಂದೆ ಹಾಸನಕ್ಕೆ ಕೋಸು ಲೋಡಿಗೆ ಹೋಗುತ್ತೇನೆಂದು ಹೇಳಿ ಹೋದವರು ಇಲ್ಲೀವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5.6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಮನೆ ಬಿಟ್ಟಾಗ ನೀಲಿ ಟೀ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಳಿವು ದೊರೆತವರು ದೂ. 08172-268410, ಎಸ್ಪಿ, ಹಾಸನ. 08172-268333 ಹಾಸನ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
ಜಿಲ್ಲಾ ಮಟ್ಟದ ಒಲಂಪಿಯಾಡ್ ಪರೀಕ್ಷೆ
ಅರಕಲಗೂಡು: ಒಲಿಂಪಿಯಾಡ್ ಜಿಲ್ಲಾ ಮಟ್ಟದ ಪರೀಕ್ಷೆ ನ.8ರಂದು ನಡೆಯಲಿದೆ. ಹಾಸನದ ವಾಣಿವಿಲಾಸ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10ರಿಂದ 11ರವರೆಗೆ ವಿಜ್ಞಾನ ಮತ್ತು ಅಪರಾಹ್ನ 12ರಿಂದ 1 ಗಂಟೆವರೆಗೆ ಗಣಿತ ಪರೀಕ್ಷೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಆಯ್ಕೆಗೊಂಡ 24 ವಿದ್ಯಾರ್ಥಿಗಳು ಕಡ್ಡಾಯವಾಗಿ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಕ್ರಮ ವಹಿಸುವಂತೆ ಬಿಇಒ ಬಿ.ರೇವಣ್ಣ ಸೂಚನೆ ನೀಡಿದ್ದಾರೆ.