ಹರಿಹಳ್ಳಿಯಲ್ಲಿ ಚಿಕ್ಕಜಾತ್ರೆ ಸಂಭ್ರಮ
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ಇರುವ ಕೆಂಚಾಂಬ ದೇವಾಲಯದಲ್ಲಿ ಚಿಕ್ಕಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ವಿಧಿವಿಧಾನಗಳಿಂದ ಬುಧವಾರ ಅದ್ಧೂರಿಯಾಗಿ ನಡೆಯಿತು. ಜಾತ್ರೆ ಪ್ರಯುಕ್ತ ತಾಲೂಕು ಉಪಖಜಾನೆಯಿಂದ ತಹಸೀಲ್ದಾರ್ ಶಾರದಾಂಬ ನೇತೃತ್ವದಲ್ಲಿ ಆಭರಣಗಳನ್ನು ತೆಗೆದುಕೊಂಡು ಕೆಂಚಾಂಬ ದೇವಿಯ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಬುಧವಾರ ಬೆಳಗ್ಗೆ ಜಾತ್ರೆ ಅಂಗವಾಗಿ ಕೆಂಡೋತ್ಸವ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲ 28 ಗ್ರಾಮಗಳ ಗ್ರಾಮಸ್ಥರು ಚಿಕ್ಕ ಜಾತ್ರಾ ಮಹೋತ್ಸವವನ್ನು ಆಚರಿಸಿದರು. ಮುಂದಿನ ವರ್ಷ ದೊಡ್ಡಜಾತ್ರೆ 10 ರಿಂದ 12 ದಿನ ನಡೆಯಲಿದೆ. ಸಪ್ತಮಾತೃಕೆಯರಲ್ಲಿ ಒಬ್ಬರಾದ ಕೆಂಚಾಂಬ ದೇವಿಗೆ ಹಾಸನಾಂಬ ದೇವಾಲಯ ಬಾಗಿಲು ಮುಚ್ಚಿದ ಮಾರನೇ ದಿನ ಚಿಕ್ಕ ಜಾತ್ರೆ ಪ್ರಯುಕ್ತ ಕೆಂಡೋತ್ಸವ ಆಚರಿಸಲಾಗುತ್ತದೆ.