ಅರಣ್ಯಭೂಮಿ ಹಕ್ಕು, ಬಡವರಿಗೆ ಉಚಿತ ಮನೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ನ.8
ಬಗರ್ಹುಕುಂ ಮತ್ತು ಅರಣ್ಯ ಭೂಮಿ ಹಕ್ಕಿಗಾಗಿ, ಬಡವರಿಗೆ ಉಚಿತ ಮನೆ, ನಿವೇಶನಕ್ಕಾಗಿ, ಜಿಲ್ಲೆಯಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಹಾಗೂ ತೆಂಗಿನ ಬೆಳೆಗೆ ಪರಿಹಾರ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ಗುರುವಾರ ಕೆಪಿಆರ್ಎಸ್ ಹಾಗೂ ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಜನರು 48 ಗಂಟೆಗಳ ಕಾಲ ಬೃಹತ್ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ನಂತರ ಜಿಲ್ಲಾಧಿಕಾರಿಯವರ ಮನವಿ ಮೇರೆಗೆ ವಾಪಸ್ ಪಡೆಯಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಹಾಗೂ ಕೂಲಿಕಾರರು ಮತ್ತು ಗ್ರಾಮೀಣ ಪ್ರದೇಶದ ಜನರು ಅತ್ಯಂತ ಸಂಕಷ್ಟದಲ್ಲಿರುವಾಗಲೂ, ಮೇಲ್ನೋಟಕ್ಕೆ ಇವರ ಪರವಾಗಿರುವಂತೆ ಬಿಂಬಿಸಿಕೊಳ್ಳುತ್ತಾ, ಅವರ ವಿರೋಧಿಯಾದ ಮತ್ತು ದೇಶದ ಹಾಗೂ ವಿದೇಶದ ದೊಡ್ಡ ಬಂಡವಾಳದಾರರು, ದೊಡ್ಡ ಭೂಮಾಲೀಕರು ಮತ್ತು ಭಾರೀ ಶ್ರೀಮಂತರ ಪರವಾದ ಜಾಗತೀಕರಣದ ನೀತಿಗಳನ್ನೇ ಮುಂದುವರಿಸುತ್ತಿವೆ ಎಂದು ದೂರಿದರು.
ಪರಿಣಾಮವಾಗಿ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೃಷಿ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಬದಲಿಗೆ, ಗ್ರಾಮೀಣ ಪ್ರದೇಶ ಅತ್ಯಂತ ಬಿಕ್ಕಟ್ಟಿಗೆ ಒಳಗಾಗಿದೆ. ಈ ದೇಶದಲ್ಲಿ ತಾನು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗದೇ, ಸಾಲದ ಬಾಧೆಯಿಂದ ಪ್ರತಿ ಅರ್ಧ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮುಂದುವರೆದಿದೆ ಎಂದು ತಿಳಿಸಿದರು.
ಗ್ರಾಮಾಂತರದಲ್ಲಿ ಶೇ. 85 ರಷ್ಟಿರುವ ಬಡ ಹಾಗೂ ಮದ್ಯಮ ರೈತರು ಮತ್ತು ಕೂಲಿಕಾರರ ದಿನದ ತಲಾ ಆದಾಯ 10 ರೂಗಳಿಗೂ ಕಡಿಮೆ ಇದ್ದು ಬಹುತೇಕರು ಅಪೌಷ್ಟಿಕತೆಯ ಹಾಗೂ ಹಸಿವಿನ ಸಾವುಗಳಿಗೆ ತುತ್ತಾಗುತ್ತಿರುವುದು ಮುನ್ನಡೆದಿದೆ. 10 ರಲ್ಲಿ 08 ಮಕ್ಕಳು ಅಗತ್ಯ ತೂಕವನ್ನು ಹೊಂದಿಲ್ಲ. ಶೇ 60ಕ್ಕೂ ಹೆಚ್ಚಿನ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕೋಟ್ಯಂತರ ಬಡ ಕುಟುಂಬಗಳು ವಾಸಿಸಲು ಮನೆ ಹಾಗೂ ನಿವೇಶನ ಖರೀದಿಸಲಾಗದೆ ಇರುವ ಮುರುಕಲು ಮನೆ ಅಥವಾ ಗುಡಿಸಲುಗಳಲ್ಲಿ 03-04 ಕುಟುಂಬಗಳು ಒಟ್ಟೊಟ್ಟಿಗೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದು ಅವುಗಳನ್ನು ಹಾಗೆಯೇ ಬಿಡಲಾಗಿದೆ. ಬಡವರು ಗ್ರಾಮಗಳಲ್ಲಿ ಬದುಕಲಾಗದೆಂದು ಗ್ರಾಮಗಳನ್ನು ತೊರೆಯುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತರ ಮತ್ತು ಕೂಲಿಕಾರರ ವಿರೋಧ ನಿಲುಮೆಯನ್ನು ಎದುರಿಸಲು ಮತ್ತು ಕಂಪೆನಿ ಕೃಷಿಯನ್ನು ಹೊಡೆದೋಡಿಸಲು ಮತ್ತು ರೈತರು ಹಾಗೂ ಕೂಲಿಕಾರರ ಕೃಷಿಯನ್ನು ಸಂರಕ್ಷಿಸಲು ಅದೇ ರೀತಿ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಹಕ್ಕಿಗಾಗಿ, ಬಡವರಿಗೆ ಉಚಿತ ಮನೆ, ನಿವೇಶನಕ್ಕಾಗಿ, ಜಿಲ್ಲೆಯಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ, ತೆಂಗಿನ ಬೆಳೆಗೆ ಪರಿಹಾರಕ್ಕಾಗಿ, ಮತ್ತಿತರೇ ಹಕ್ಕೊತ್ತಾಯಗಳಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್), ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯಿಂದ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ಸ್ಥಳೀಯ ಸಮಸ್ಯೆಗಳ ಕುರಿತು ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಕೈಬಿಡಲಾಯಿತು.
ಈ ವೇಳೆ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ಕುಮಾರ್, ತಾಲೂಕು ಅಧ್ಯಕ್ಷ ನಂಜೇಗೌಡ, ಕಾರ್ಯದರ್ಶಿ ಪ್ರಕಾಶ್, ಕೆ.ಎಲ್. ಶಂಕರ್, ವಿಪೂಪಾಕ್ಷ, ಧರ್ಮೇಶ್ ಇತರರು ಇದ್ದರು.