ಇಂದು ಕಟ್ಟಡ ಉದ್ಘಾಟನೆ
ಹೊಳೆನರಸೀಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಪಟ್ಟಣದ ರಿವರ್ಬಂಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ನ.8ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಟಿಎಪಿಸಿಎಂಎಸ್ನ ಅಧ್ಯಕ್ಷರು ಜಿ.ಪಂ ಸದಸ್ಯರೂ ಆದ ಎಚ್.ಎನ್. ದೇವೇಗೌಡ (ಪಾಪಣ್ಣಿ) ತಿಳಿಸಿದ್ದಾರೆ. ನೂತನ ಹೆಚ್ಚುವರಿ ಕಟ್ಟಡವನ್ನು ಶಾಸಕ ಎಚ್.ಡಿ. ರೇವಣ್ಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಸಹಕಾರ ಇಲಾಖೆಯ ಜಿಲ್ಲಾ ಉಪ-ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ಇತರರು ಉಪಸ್ಥಿತರಿದ್ದು, ಮಾಜಿ ಪ್ರಧಾನಿಗಳು ಹಾಗೂ ಜಿಲ್ಲೆಯ ಸಂಸದ ಎಚ್.ಡಿ. ದೇವೇಗೌಡ ಅಧ್ಯಕ್ಷತೆ ವಹಿಸಲಿರುವುದಾಗಿ ತಿಳಿಸಿದ್ದಾರೆ.
ಚಿರತೆ ಮರಿ ಸೆರೆ
ಹಾಸನ: ನಗರದ ಹೊರವಲಯದಲ್ಲಿ ಇರುವ ಕೇಂದ್ರ ಬಾಹ್ಯಾಕಾಶ ನಿಯಂತ್ರಣ ಕೇಂದ್ರ (ಎಂಸಿಎಫ್ )್ಭದ್ರತಾ ಸಿಬ್ಬಂದಿ ವಸತಿಗೃಹಗಳ ಸಮೀಪ ಬಂದ ಚಿರತೆ ಮರಿಯೊಂದು ಗುರುವಾರ ಅರಣ್ಯ ಸಿಬ್ಬಂದಿ ಸೆರೆ ಹಿಡಿದರು. ಸುಮಾರು 3 ರಿಂದ 4 ತಿಂಗಳ ಚಿರತೆ ಮರಿ ಸಂಜೆ 7 ರಲ್ಲಿ ಕಾಣಿಸಿಕೊಂಡ ಕೂಡಲೇ ನೂರಾರು ಜನರು ಅದನ್ನು ಅಟ್ಟಾಡಿಸಿಕೊಂಡು ಹೋದರು. ಈ ಸಂದರ್ಭದಲ್ಲಿ ಸುಸ್ತಾಗಿ ನಿಂತ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು, ಕಾಡಿಗೆ ಬಿಡಲು ತೆಗೆದುಕೊಂಡು ಹೋದರು. ಜನರು ಓಡಿಸಿಕೊಂಡು ಬಂದ ಸಂದರ್ಭದಲ್ಲಿ ಬಿದ್ದ ಕಾರಣ ಚಿರತೆ ಮರಿ ಬಾಯಿ ಮತ್ತು ಕಾಲಿಗೆ ಗಾಯಗಳಾಗಿದ್ದವು. ಅರಣ್ಯ ಸಿಬ್ಬಂದಿ ಚಿಕಿತ್ಸೆ ನೀಡಿದರು. ಸ್ಥಳಕ್ಕೆ ಬಂದ ಶಾಸಕ ಎಚ್.ಎಸ್. ಪ್ರಕಾಶ್ ಅವರು, ಚಿರತೆಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ತಂತಿ ತಗುಲಿ ಸಾವು
ಸಕಲೇಶಪುರ: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಕಲ್ಗಣೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ವಾಸಿ ಪರಮೇಶ (40) ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ದುರ್ದೈವಿ. ದನಗಳಿಗೆ ಮೇವು ತರಲು ಗದ್ದೆಗೆ ಹೋಗಿ ಹುಲ್ಲುಕೊಯ್ಯುತ್ತಿದ್ದ ಸಂದರ್ಭದಲ್ಲಿ ತಂತಿ ತುಂಡಾಗಿರುವುದು ಅರಿವಿಲ್ಲದೆ ಆಕಸ್ಮಿಕವಾಗಿ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಅಪಹರಣ
ಅರಸೀಕೆರೆ: ಬಸ್ಸಿಗಾಗಿ ಕಾಯುತ್ತಿದ್ದ ಆಶಾ ಕಾರ್ಯಕರ್ತೆಯನ್ನು ಅಪರಿಚಿತ ಬೈಕ್ ಸವಾರನೊಬ್ಬ ವಿಳಾಸ ಕೇಳುವ ನೆಪದಲ್ಲಿ ಆಕೆಯ ವೆನಿಟಿ ಬ್ಯಾಗ್ನಲಿದ್ದ 20 ಗ್ರಾಂ ಚಿನ್ನದ ಸರ ಹಾಗೂ 4 ಸಾವಿರ ನಗದು ಹಣ ದೋಚಿ ಆಕೆಯನ್ನು ತಳ್ಳಿ ಪರಾರಿಯಾದ ಘಟನೆ ಬುಧವಾರ ಸಂಜೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ಬಳಿ ನಡೆದಿದೆ. ಆಶಾ ಕಾರ್ಯಕರ್ತೆಯಾದ ಹೇಮಾವತಿ ಎಂಬವರು ಬಸ್ಸಿಗಾಗಿ ಕಾಯುತ್ತಿದ್ದ ವೇಳೆಯಲ್ಲಿ ಬಂದ ಅಪರಿಚಿತನೊಬ್ಬ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾನೆ. ನಂತರ ಆಕೆಯ ಬಳಿ ಇದ್ದ ವ್ಯಾನಿಟಿ ಬ್ಯಾಗನ್ನು ಕಿತ್ತು ಪರಾರಿಯಾಗಿದ್ದಾನೆ. ಅದರಲ್ಲಿ 20ಗ್ರಾಂ ಚಿನ್ನದ ಚೈನ್, 4 ಸಾವಿರ ರು. ನಗದು ಇತ್ತೆಂದು ಆಕೆ ಬಾಣಾವರ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಂದನಾ ಕಾರ್ಯಕ್ರಮ
ನುಗ್ಗೇಹಳ್ಳಿ: ನುಗ್ಗೇಹಳ್ಳಿಯಲ್ಲಿ ನ.8 ರಂದು ಮಧ್ಯಾಹ್ನ 12 ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲಾ ಆವರಣದಲ್ಲಿ 58ನೇ ಕನ್ನಡ ರಾಜೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. 1955ರಲ್ಲಿ ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶಿಸ್ತು ಸಮಯಪಾಲನೆ ಶುಚಿತ್ವ ಬಡ ರೈತರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ ಆದರ್ಶ ಶಿಕ್ಷಣ ತಜ್ಞ ಪ್ರೊ. ಕೆ ಜಿ ಸತ್ಯನಾರಾಯಣ ಅವರಿಗೆ ಅಳೆಯ ವಿದ್ಯಾರ್ಥಿಗಳ ಸಮೂಹ ಸರ್ಕಾರಿ ಪ್ರೌಢಶಾಲೆ ಅಭಿಮಾನಿಗಳ ಬಳಗದಿಂದ ಗುರುವಂದನಾ ಕಾರ್ಯಕ್ರಮವಿದೆ.