ಎಲ್ಲ ಜನಾಂಗದ ಮಹಿಳೆಯರಿಗೆ 'ಶಾದಿ ಭಾಗ್ಯ' ಕಲ್ಪಿಸಲು ಆಗ್ರಹ
ಕ.ಪ್ರ.ವಾರ್ತೆ ಹಾಸನ ನ. 7
ಎಲ್ಲ ಜನಾಂಗದ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ಕಲ್ಪಿಸಬೇಕೆಂದು ನರೇಂದ್ರ ಮೋದಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಕೃಷ್ಣಸ್ವಾಮಿ ಆಗ್ರಹಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತವಾಗಿ ಶಾದಿ ಭಾಗ್ಯ ಯೋಜನೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿ 50 ಸಾವಿರ ಧನ ಸಹಾಯ ನೀಡಲು ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ದೂರಿದರು. ಎಲ್ಲ ಧರ್ಮ, ಜಾತಿ, ಸಮುದಾಯಗಳಲ್ಲೂ ತಮ್ಮ ತಮ್ಮ ಸಂಪ್ರದಾಯದಂತೆ ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಆರ್ಥಿಕ ಶಕ್ತಿ ಇಲ್ಲದೆ ಸಾಮಾಜಿಕ ನಿಂದನೆಗೆ ಒಳಗಾಗಿ ಹುಟ್ಟಿದ ಸ್ಥಳವನ್ನೇ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಉಳಿದವರು ತಮ್ಮ ಅಲ್ಪಸಲ್ಪ ಆಸ್ತಿಯನ್ನು ಹೆಣ್ಣು ಮಕ್ಕಳ ಮದುವೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವ ಮೂಲಕ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಒಂದು ಜನಾಂಗಕ್ಕೆ ಶಾದಿ ಭಾಗ್ಯ ಯೋಜನೆ ನೀಡುವ ಮೂಲಕ ಮತಗಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು. ವಿಧಾನಸಭೆ ಅಧಿವೇಶನದ ಒಳಗೆ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಹೆಣ್ಣು ಮಕ್ಕಳಿಗೂ ಅನ್ವಯವಾಗಬೇಕು. ಇಲ್ಲವಾದರೆ ಈ ಹೆಣ್ಣು ಮಕ್ಕಳಿಂದ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಯೋಜಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಜಾನೆಕೆರೆ ಹೇಮಂತ್, ಭ್ರಮಾರಂಭ, ವಕೀಲೆ ವೇದಾವತಿ ಇದ್ದರು.