ಕಂದಾಯ ಭೂಮಿ ಒತ್ತುವರಿ ಕಾರ್ಯ ಮುಕ್ತಾಯ
ಕ.ಪ್ರ.ವಾರ್ತೆ ಸಕಲೇಶಪುರ ನ. 7
ಕಂದಾಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಬುಧವಾರ ಮುಕ್ತಾಯಗೊಂಡಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಎರಡು ಹಿಟಾಚಿಗಳನ್ನು ಬಳಸಿಕೊಂಡು ಸುಮಾರು 48 ಎಕರೆ ಭೂಮಿಯನ್ನು ಕಳೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಕಂದಕ ನಿರ್ಮಿಸುವ ಮೂಲಕ ವಶಪಡಿಸಿಕೊಂಡಿದೆ.
ಗ್ರಾಮಸ್ಥರ ಅಳಲು: ಭೂಮಿ ಕಳೆದುಕೊಂಡಿರುವ ಸಂತ್ರಸ್ತರು ಮಾತನಾಡಿ, ಕಳೆದ ಮೂರು ತಲೆಮಾರುಗಳಿಂದ ಇದೇ ಜಾಗದಲ್ಲಿ ರಾಗಿ ಬೆಳೆದು ತಿನ್ನುತ್ತಿದ್ದ ನಮ್ಮಿಂದ ಜಾಗ ಕಿತ್ತುಕೊಂಡಿದ್ದಾರೆ. ನಾವು ನಂಬಿ ಬದುಕುತ್ತಿದ್ದ ಭೂಮಿ ಕೈತಪ್ಪಿರುವುದರಿಂದ ಮುಂದಿನ ಜೀವನ ಹೇಗೆ ಎಂಬುದು ಚಿಂತೆಯಾಗಿದ್ದು ಹಿರಿಯ ಅಧಿಕಾರಿಗಳು ಗ್ರಾಮದಲ್ಲಿ ಭೂಮಿ ಇಲ್ಲದವರನ್ನು ಗುರುತಿಸಿ ತಲಾ ಅರ್ಧ ಎಕರೆ ಜಾಗವನ್ನು ನಮಗೆ ಬಿಡಿಸಿ ಕೊಡಲಿ ಎಂದು ವಿನಂತಿಸಿಕೊಂಡಿದ್ದಾರೆ.