ಮೃತ ಯೋಧನ ಕುಟುಂಬ ಸಂಕಷ್ಟ ಕಂಡು ಕಣ್ಣೀರಿಟ್ಟ ದೇವೇಗೌಡರು
ಹಾಸನ: ಭಾರತದ ಗಡಿಯಲ್ಲಿರುವ ಅತ್ಯಂತ ಎತ್ತರ ಪ್ರದೇಶವಾದ ಸಿಯಾಚಿನ್ ಗಡಿಯಲ್ಲಿ ಮಡಿದ ಯೋಧನ ಕುಟುಂಬವೊಂದು ಈಗ ಅಕ್ಷರಶಃ ಅನಾಥವಾಗಿದೆ. ಎಂಟು ತಿಂಗಳ ಗುಂಡು ಮಗು, ನಾಲ್ಕು ವರ್ಷದ ಹೆಣ್ಣು ಮಗು ಇರುವ ಯೋಧನ ಪತ್ನಿ, ಕಂಡ ಕಂಡವರನ್ನೆಲ್ಲಾ ಭೇಟಿಯಾಗಿ ಸಹಾಯ ಬೇಡುತ್ತಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಇದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಅಗ್ರಹಾರ ಗ್ರಾಮದ ಮೃತ ಯೋಧ ಯೋಗಾನಂದ ಅವರ ಪತ್ನಿ ಲಕ್ಷ್ಮೀಯವರ ಗೋಳು. ಪತಿ ಮಡಿದು ಆರೇಳು ತಿಂಗಳಾದರೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಇದರಿಂದ ಬೇಸತ್ತಿದ್ದ ಲಕ್ಷ್ಮೀ ಗುರುವಾರ ಹಾಸನದ ಪ್ರವಾಸಿ ಮಂದಿರದ ಕೊಠಡಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ, ಮಕ್ಕಳನ್ನು ಗೌಡರ ಕೈಗೆ ಕೊಟ್ಟು, ಕಾಲಿಗೆ ಎರಗಿದಳು. ಇದನ್ನು ಕಂಡ ಗೌಡರು, ಮಗುವನ್ನು ಬಾಚಿ ತಬ್ಬಿಕೊಂಡು ಗಳಗಳನೆ ಅತ್ತರಲ್ಲದೇ, ಕೆಲ ನಿಮಿಷ ದಟ್ಟ ಮೌನಕ್ಕೆ ಶರಣಾದರು. ಇದನ್ನು ಕಂಡು ಅಲ್ಲಿದ್ದ ಜನರು, ಗೌಡರಿಗೆ ಏನಾಗಿದೆ ಎಂದು ಗಾಬರಿಗೊಂಡು ಹತ್ತಿರ ಬಂದು ಎಚ್ಚರಿಸಲು ಯತ್ನಿಸಿದರು. ಮತ್ತೆ ಚೇತರಿಸಿಕೊಂಡು ಎದ್ದ ಗೌಡರು, ಆಳುವವರ ವಿರುದ್ಧ ಕೆಂಡ ಕಾರಿದರಲ್ಲದೇ, ದೇಶದ ಗಡಿ ಕಾಯುತ್ತಿದ್ದಾಗ ಮೃತಪಟ್ಟ ಯೋಧನ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವಾಗ ಸಹಾಯಕ್ಕೆ ಬಾರದಿರುವುದು ದೇಶಕ್ಕೆ ಮಾತ್ರವಲ್ಲ, ರಾಜಕಾರಣಿಗಳು, ಅಧಿಕಾರಿಗಳಿಗೆ ಒಳ್ಳೆಯದಾಗುವುದಿಲ್ಲ ಎಂದು ಹಿಡಿ ಶಾಪ ಹಾಕಿದರು. ಜೊತೆಗೆ ಕೇಂದ್ರವನ್ನೂ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಗೌಡರು, ತಮ್ಮ ಗನ್ ಮ್ಯಾನ್ನಿಂದ ಸೂಟ್ಕೇಸ್ ತರಿಸಿ, 1 ಲಕ್ಷ ಹಣವನ್ನು ಯೋಧನ ಪುತ್ರಿಗೆ ನೀಡಿದರು. 'ಚೆಕ್ ನೀಡಿದರೇ ನೀನು (ಯೋಧನ ಪತ್ನಿ ಲಕ್ಷ್ಮೀ) ಅಕೌಂಟ್ ಓಪನ್ ಮಾಡಿ ದುಡ್ಡು ತೆಗೆದುಕೊಳ್ಳಲು ವಿಳಂಬವಾಗುತ್ತದೆ. ಆದ್ದರಿಂದ ಹಣ ನೀಡಿದ್ದೇನೆ. ಕುಟುಂಬ ನಿರ್ವಹಣೆಗೆ ಸದ್ಯಕ್ಕೆ ಬಳಸಿಕೋ. ಈಗ ವೈದ್ಯಕೀಯ ಶಿಕ್ಷಣ ಸಚಿವರು ಬರುತ್ತಾರೆ. ಅವರನ್ನು ಭೇಟಿ ಮಾಡಿ ನಿನಗೆ ಉದ್ಯೋಗ ನೀಡುವಂತೆ ಬೇಡಿಕೊಳ್ಳುತ್ತೇನೆ' ಎಂದು ಭರವಸೆ ನೀಡಿದರು. ವೈದ್ಯಕೀಯ ಶಿಕ್ಷಣ ಡಾ.ಶರಣ ಪ್ರಕಾಶ್ ಪಾಟೀಲರು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದಾಗ, ಯೋಧನೆ ಪತ್ನಿಗೆ ಸರ್ಕಾರದಿಂದಾಗುವ ಸಹಾಯ ಮಾಡುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಉನ್ನತಾಧಿಕಾರಿಗಳೊಡನೆ ಚರ್ಚಿಸಿ ಸೂಕ್ತ ಕೆಲಸ ನೀಡುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಭರವಸೆ ನೀಡಿದರು. ದೇವೇಗೌಡರು, ಒಂದು ಲಕ್ಷ ರು. ನೀಡಿ, ಉದ್ಯೋಗ ಕೊಡಿಸುವ ಪ್ರಯತ್ನ ಮಾಡಿದರು. ನಾನೆಂದಿಗೂ ಗೌಡರನ್ನು ಮರೆಯಲಾರೆ ಎಂದು ಮೃತ ಯೋಧನ ಪತ್ನಿ ಲಕ್ಷ್ಮೀ ಕಣ್ಣೀರು ಹಾಕುತ್ತಾ ಹೇಳಿದರು.
ದಯಾಶಂಕರ ಮೈಲಿ