ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈದ್ಯ ಶಿಕ್ಷಣ ಲೋಪ ಸುಧಾರಣೆಗೆ ಹೊಸ ನೀತಿ: ಡಾ.ಶರಣ ಪ್ರಕಾಶ್

Rashmi Kasaragodu
Updated On : 8 Nov 2013, 1:20 am

ಹಾಸನ: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಸೀಟುಗಳ ಹಂಚಿಕೆ, ಪರೀಕ್ಷಾ ವಿಧಾನ, ಮೀಸಲಾತಿ ವ್ಯವಸ್ಥೆ ಮತ್ತು ಶುಲ್ಕ ಪದ್ಧತಿಯಲ್ಲಿರುವ ಲೋಪ ಸುಧಾರಿಸಲು ಹೊಸ ನೀತಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಹೊಸ ನೀತಿ ಪ್ರಕಾರ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 2 ಸಮಿತಿಗಳಿರುತ್ತವೆ. ಒಂದು ಸಮಿತಿ ಶುಲ್ಕ ನಿಗದಿ ಬಗ್ಗೆ ನಿರ್ಧರಿಸಿದರೆ, ಮತ್ತೊಂದು ಪರೀಕ್ಷೆ ವ್ಯವಸ್ಥೆ ಮತ್ತು ಮೀಸಲಾತಿ ವ್ಯವಸ್ಥೆ ಸುಧಾರಿಸಲು ತೀರ್ಮಾನ ತೆಗೆದುಕೊಳ್ಳುತ್ತದೆ. ಸಮಿತಿಗಳ ಸೂಚನೆಯಂತೆ ಶುಲ್ಕ, ಪರೀಕ್ಷೆ, ಸೀಟುಗಳ ಮೀಸಲಾತಿ ಇರಬೇಕಾಗುತ್ತದೆ. ಮುಂದಿನ ವರ್ಷ ಈ ವ್ಯವಸ್ಥೆ ಜಾರಿಗೆ ತರಲು ಪ್ರಾಮಾಣಿಕ ಯತ್ನ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಇಬ್ಬರು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಸಿಇಟಿ ಮೂಲಕ ಹಂಚಿಕೆಯಾದ ಸೀಟುಗಳನ್ನು ನೀಡಲು ಹೆಚ್ಚು ಶುಲ್ಕವನ್ನು ಕೆಲ ಖಾಸಗಿ ಕಾಲೇಜುಗಳು ಪಡೆಯುತ್ತಿವೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಕಾಲೇಜಿಗೆ ಬಂದಿರುವ 144 ತಜ್ಞ ವೈದ್ಯರನ್ನು ಮಾತೃ ಇಲಾಖೆಗೆ ಕಳುಹಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಆದರೆ ತಜ್ಞ ವೈದ್ಯರು ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಗದಗ, ಮಡಿಕೇರಿ, ಕಾರವಾರ, ಚಾಮರಾಜನಗರ, ಗುಲ್ಬರ್ಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ತಲಾ 30 ಕೋಟಿ ನಿಗದಿ ಮಾಡಲಾಗಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement