ಶೀಘ್ರ ದಲಿತ ಹಿತರಕ್ಷಣಾ ಸಭೆ: ದೇವೇಗೌಡ
ಕ.ಪ್ರ.ವಾರ್ತೆ ಹಾಸನ ನ.7
ಜಿಲ್ಲೆಯಲ್ಲಿ ದಲಿತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು ತಕ್ಷಣವೇ ದಲಿತರ ಸಭೆ ಕರೆಯಬೇಕೆಂದು ದಸಾಪ ಹಾಗೂ ಸಮತಾ ಸೈನಿಕ ದಳ ಮಾಜಿ ಪ್ರಧಾನಿ ದೇವೇಗೌಡರನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ಮತ್ತು ಸಮತಾ ಸೈನಿಕ ದಳದ ಆರ್ಪಿಐ ಸತೀಶ್ ಅರ್ಧ ಗಂಟೆ ಕಾಲ ಗೌಡರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ದಲಿತರ ಸಮಸ್ಯೆಗಳು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ವಿವರಿಸಿ, ಮನವರಿಕೆ ಮಾಡಿದರು.
ಈ ಸಂಬಂಧ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿದ ಮಾಜಿ ಪ್ರಧಾನಿಗಳು ಮನವಿಗೆ ಪೂರಕವಾಗಿ ಸ್ಪಂದಿಸಿ ಈ ತಿಂಗಳ 15 ರ ನಂತರ ದಲಿತ ಮುಖಂಡರ ಸಭೆ ಕರೆದು ಈ ಬಗ್ಗೆ ಅಧಿಕಾರಿಗಳೊಂದಿಗೆನ ಚರ್ಚಿಸಲಾಗುವುದು ಎಂಬ ಭರವಸೆ ನೀಡಿದರು.
ಅರಕಲಗೂಡು ತಾಲೂಕು ರಾಗಿ ಮರೂರು ಗ್ರಾಮದ ಜೀತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ದಸಾಪ ಜಿಲ್ಲಾಧ್ಯಕ್ಷ ನಾಗರಾಜ್ ಹೆತ್ತೂರು, ಗ್ರಾಮಕ್ಕೆ ಭೇಟಿ ನೀಡಿ ಜೀತ ಕುಟುಂಬಗಳನ್ನು ಭೇಟಿ ಮಾಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಎ.ಟಿ. ರಾಮಸ್ವಾಮಿ ಅವರನ್ನು ತಕ್ಷಣವೇ ಕಳಿಸುವ ಜೊತೆ ದಲಿತ ಮುಖಂಡರೊಂದಿಗೆ ತಾವೂ ರಾಗಿಮರೂರಿಗೆ ಭೇಟಿ ನೀಡುವುದಾಗಿ ಗೌಡರು ಒಪ್ಪಿಕೊಂಡರು.
ಕುದುರುಗುಂಡಿ ಗ್ರಾಮದಲ್ಲಿ ದಲಿತ ಕೋಡಿಗಯ್ಯನ ಮೇಲೆ ಸವರ್ಣೀಯರ ಹಲ್ಲೆ, ಜಿಲ್ಲೆಯ ಬ್ಯಾಂಕುಗಳಲ್ಲಿ ದಲಿತರಿಗೆ ಸಾಲ ನಿರಾಕರಿಸುತ್ತಿರುವ ಮತ್ತು ಕಿರುಕುಳ ನೀಡುತ್ತಿರುವ ಬಗ್ಗೆ ಆರ್ಪಿಐ ಸತೀಶ್ಗೌಡರಿಗೆ ಮನವರಿಕೆ ಮಾಡಿದರು. ಈ ಬಗ್ಗೆ ದಲಿತ ಮುಖಂಡರ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವುದಾಗಿ ಗೌಡರು ಭರವಸೆ ನೀಡಿದರು.
ಈ ಸಂದರ್ಭ ಜೆಡಿಎಸ್ ಯುವ ಮುಖಂಡ ಹೊಂಗೆರೆ ರಘು, ಜಿಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಮೈಲನಹಳ್ಳಿ ಮಂಜೇಗೌಡ ಇತರರು ಇದ್ದರು.