ಬೆಟ್ಟದಪುರ ರಂಗನಾಥಸ್ವಾಮಿ ದೇಗುಲದಲ್ಲಿ ರು. 5.50 ಲಕ್ಷದ ನೂತನ ಗರುಡಗಂಬ ಸಿದ್ಧ
ಹಾರನಹಳ್ಳಿ: ಅರಸೀಕೆರೆ ತಾಲೂಕಿನ ಬೆಟ್ಟದಪುರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸುಮಾರು 5.50 ಲಕ್ಷ ರು. ವೆಚ್ಚದಲ್ಲಿ ನೂತನ ಗರುಡಗಂಬ ನಿರ್ಮಿಸಲಾಗಿದೆ. ಸರ್ಕಾರದಿಂದ 1.50 ಲಕ್ಷ ಅನುದಾನ ಹಾಗೂ ಉಳಿತಾಯ ಖಾತೆ ದೇವಾಲಯ ನಿಧಿಯಿಂದ 1.50 ಲಕ್ಷ ರು. ಹಾಗೂ ಇನ್ನುಳಿದ ಹಣವನ್ನು ಭಕ್ತಾದಿಗಳ ಧನ ಸಹಾಯದಿಂದ ಗರುಡುಗಂಬ ನಿರ್ಮಾಣ ಮಾಡಲಾಗಿದೆ ಎಂದು ಅರ್ಚಕ ಸತ್ಯನಾರಾಯಣ ತಿಳಿಸಿದ್ದಾರೆ.
ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಚಲ್ಲಯ್ಯ 17 ಅಡಿ ಗರುಡಗಂಬ ಹಾಗೂ ಬಲಿಪೀಠವನ್ನು ಕೆತ್ತನೆ ಮಾಡಿದ್ದಾರೆ. ನ.20 ರಂದು ಗರುಡಗಂಬಕ್ಕೆ ಪೂಜೆ ಸಲ್ಲಿಸಲಾಗುವುದು. ಉತ್ತರಾಯಣ ಪುಣ್ಯಕಾಲದಲ್ಲಿ ಗರುಡಗಂಬ ಪ್ರತಿಷ್ಠಾಪನೆ ಹಾಗೂ ತಿರುಮಲ ತಿರುಪತಿ ದೇವಾಲಯ ವತಿಯಿಂದ ಅಂಡಾಳು ದೇವಿ, ಜಯವಿಜಯ ದ್ವಾರಪಾಲಕರು ಆಳ್ವಾರುಗಳ ಆಚಾರ್ಯರ ಪ್ರತಿಷ್ಠಾಪನಾ ಕಾರ್ಯ ನಡೆಸುವುದಾಗಿ ತಿಳಿಸಿದರು.