ಬೆಳಗಾವಿ ಅಧಿವೇಶನದಲ್ಲಿ ಮೌಢ್ಯ ತಡೆಯುವ ಮಸೂದೆ ಅಂಗೀಕಾರ: ಶರಣು ಪ್ರಕಾಶ್ ಪಾಟೀಲ್
ಕ.ಪ್ರ. ವಾರ್ತೆ ಚನ್ನರಾಯಪಟ್ಟಣ ನ.8
ಮೂಢನಂಬಿಕೆ ಬಗ್ಗೆ ಕಂದಾಚಾರಗಳ ಮೂಲಕ ಸಾಮಾನ್ಯ ಜನರಿಂದ ಹಣ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅಂಗಿಕರೀಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಡವರಿಗೆ, ಹಸಿದ ಹೊಟ್ಟೆಗೆ ಅನ್ನ ನೀಡುವ ಸಲುವಾಗಿ ಬಿಪಿಎಲ್ ಕಾರ್ಡ್ ಮೂಲಕ ಅಕ್ಕಿ ನೀಡುತ್ತಿದ್ದೇವೆ. ಸರ್ಕಾರಿ ವೈದ್ಯರು ಕೆಲಸದ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ವೈದ್ಯಕೀಯ ಪ್ರವೇಶದಲ್ಲಿ ಓದಿದ ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಮತ್ತು ಕಾಲೇಜಿನಿಂದ ಯಾವುದೇ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಈಗಾಗಲೇ ರಾಜ್ಯದಲ್ಲಿ 9 ಕೋಟಿ ರು. ದಂಡ ವಸೂಲಿಯಾಗಿರುವುದಾಗಿ ತಿಳಿಸಿದರು.ಶಾದಿಭಾಗ್ಯ ಹೋರಾಟದ ಬಗ್ಗೆ ಬಜೆಟ್ನಲ್ಲಿ ಮಂಡಿಸಿದಾಗ ಬಿಜೆಪಿ ಮತ್ತು ಕೆಜೆಪಿ ಪಕ್ಷಗಳು ಯಾವುದೇ ವಿರೋಧ ವ್ಯಕ್ತಪಡಿಸದೆ ಈಗ ಏಕಾಏಕಿ ಹೋರಾಟ ಮಾಡುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಅಣತಿಶೇಖರ್, ಪಿ.ಜೆ.ಮಂಜುನಾಥ್, ಶ್ರೀಕಂಠಪ್ಪ, ಅವಿನಾಶ್ ಇತರರು ಇದ್ದರು.