ಬೋಧನೆ ಜತೆಯಲ್ಲಿಯೇ ಜೀವನದ ಅರ್ಥ ತಿಳಿಸಿ: ಪಟೇಲ್ ಶಿವರಾಂ
ಕನ್ನಡಪ್ರಭ ವಾರ್ತೆ ಹಾಸನ ನ. 8
ಇಂದಿನ ದಿನಗಳಲ್ಲಿ ಯುವ ಜನಾಂಗದಲ್ಲಿ ನೈತಿಕ ಮಟ್ಟ ಕುಸಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾಥಿಗಳಿಗೆ ಬೋಧನೆ ಜತೆ ಜತೆಯಲ್ಲಿಯೇ ಜೀವನದ ಅರ್ಥವನ್ನು ಕೂಡಾ ತಿಳಿಸಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕರೆ ನೀಡಿದ್ದಾರೆ.
ನಗರದ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿರುವ ಎರಡು ದಿನಗಳ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಬೋಧನೆಯಿಂದ ಒಬ್ಬ ವಿದ್ಯಾರ್ಥಿ ಜೀವನದ ಅರ್ಥವು ತಿಳಿಯುವುದಿಲ್ಲ. ಗುರುಗಳಾದವರು ಸಮಾಜದ ಒಳಿತಿನ ಹಿತದೃಷ್ಟಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಮುಂದೆ ತರಲು ಪ್ರಯತ್ನ ಅಗತ್ಯ ಎಂದು ಸಲಹೆ ನೀಡಿದರು.
ಈಗ ಮಹಿಳೆಯರಿಗೂ ಮೀಸಲಾತಿ ಇದ್ದು, ಶಿಕ್ಷಣದಿಂದ ಕೆಲಸದ ನೇಮಕಾತಿಯಲ್ಲೂ ಅವಕಾಶಗಳು ಲಭ್ಯವಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ ಅವರು, ವಿದ್ಯಾಭ್ಯಾಸದಲ್ಲಿ ಮಹಿಳೆಯರೇ ಹೆಚ್ಚು ರ್ಯಾಂಕ್ ಪಡೆಯುತ್ತಿದ್ದಾರೆ. ಮಹಿಳೆಯರು ನಿರಶ್ರಿತರು ಆಗುವಂತಹ ಪರಿಸ್ಥಿತಿಗೆ ಅವಕಾಶವೇ ಇಲ್ಲ. ಸ್ವಾವಲಂಬನೆಯನ್ನು ಮಾಡುವ ಮೂಲಕ ಪೂರ್ಣ ಪ್ರಮಾಣದಲ್ಲಿ ತಮ್ಮ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಕಾಲೇಜಿಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಮಾಡಲಾಯಿತು. ಪ್ರಾಂಶುಪಾಲ ಐ.ಎಮ್. ಮೋಹನ್, ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರು ಡಿ.ಜಿ. ಕೃಷ್ಣೇಗೌಡ, ಬೆಂಗಳೂರು ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ತರಬೇತಿ ನಿರ್ದೇಶಕ ಆರ್.ಎಸ್. ದೇಶಪಾಂಡೆ, ಅರ್ಥಶಾಸ್ತ್ರ ಪಿಜಿ ವಿಭಾಗದ ಜೆ. ದೇವಕುಮಾರಿ, ಸಿ.ಎಸ್. ಶಿವೇಗೌಡ, ಸಮಾಜಶಾಸ್ತ್ರ ಪಿಜಿ ವಿಭಾಗದ ವಿ. ಸುನೀತಾ ಇತರರು ಇದ್ದರು.