ಲಕ್ಷ್ಮಿದೇವಿ ಅಮ್ಮ ಜಾತ್ರೆ, ಸಿಡಿ ಉತ್ಸವ
ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿ ದಮ್ಮಿನಿಂಗಲ ಲಕ್ಷ್ಮಿದೇವಿ ಅಮ್ಮನವರ ಜಾತ್ರೆ ಹಾಗೂ ಜೋಡಿ ಸಿಡಿ ಉತ್ಸವ ಅದ್ದೂರಿ ಹಾಗೂ ಸಂಭ್ರಮದಿಂದ ಮಂಗಳವಾರ ಸಂಜೆ ನಡೆಯಿತು.
ಸುತ್ತಮುತ್ತಲಿನ 16ಕ್ಕೂ ಹೆಚ್ಚು ಗ್ರಾಮದ ಭಕ್ತರು ಅಮ್ಮನವರ ಸಿಡಿ ಉತ್ಸವದಲ್ಲಿ ಪಾಲ್ಗೊಂಡು, ಉತ್ಸವದಲ್ಲಿ ಮಕ್ಕಳನ್ನು ಸಿಡಿ ಪ್ರದಕ್ಷಿಣೆಗೆ ಅರ್ಪಿಸಿ ಹರಕೆ ತೀರಿಸಿದರು.
ಸಿಡಿ ಉತ್ಸವಕ್ಕೆ ಹಲವೆಡೆಗಳಲ್ಲಿ ಸಿಡಿ ಕಂಬಗಳಿಗೆ ಸಿಡಿ ಕಂಬವನ್ನು ಅಳವಡಿಸಿ ಉತ್ಸವ ನೆರವೇರಿಸಿದರು. ದಮ್ಮನಿಂಗಲ ಹಾಗೂ ಪಕ್ಕದ ಹೊನ್ನೇನಹಳ್ಳಿ ಜೋಡಿ ಸಿಡಿ ಉತ್ಸವದ ವಿನೂತನವಾಗಿದ್ದು, ಸಿಡಿ ಕಂಬಗಳ ಬದಲಾಗಿ ಪುರಾತನ ಕಾಲದಲ್ಲಿಯೇ ರಥದ ರೀತಿಯಲ್ಲಿ ಸಿಡಿ ಕಂಬವನ್ನು ಗಾಲಿ ರೂಪದಲ್ಲಿ ನಿರ್ಮಿಸಿದ್ದಾರೆ.
ದೀಪಾವಳಿ ನಂತರ ಪ್ರಥಮ ಸೋಮವಾರದಂದು ರಾತ್ರಿ ಸಿಡಿ ಕಂಬವನ್ನು ಹೊನ್ನೇನಹಳ್ಳಿ ಮತ್ತು ದಮ್ಮನಿಂಗಲ ಗ್ರಾಮದಿಂದ ಭಕ್ತರು ಎಳೆದು ತಂದು ಲಕ್ಷ್ಮಿದೇವಿ ಅಮ್ಮನವರ ದೇವಾಲಯ ಮುಂಭಾಗದಲ್ಲಿ ವಿವಿಧ ಪೂಜೆ, ಬಾಯಿಬೀಗ ಹರಕೆಯನ್ನು ತೀರಿಸಿದ ಭಕ್ತರು ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಗ್ರಾಮದ ಹಿರಿಯರ ಪ್ರಕಾರ ಸುಮಾರು 300 ವರ್ಷಗಳಿಂದ ಸಿಡಿ ಉತ್ಸವ ನೆರವೇರುತ್ತಿದ್ದು, ಅಂದಿನಿಂದ ದೀಪಾವಳಿ ಕಳೆದ ಪ್ರಥಮ ಸೋಮವಾರ ರಾತ್ರಿಯಿಂದ ವಿವಿದ ಪೂಜೆಗಳು ನೆರವೇರಿಸಿದ ನಂತರ ಮಂಗಳವಾರ ಸಿಡಿ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ ಸಿಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.