ಶಾಸಕ ಮಂಜುಗೆ ಸಚಿವ ಸ್ಥಾನ ತಪ್ಪಿದ್ದು ತಾಲೂಕಿಗೆ ಗ್ರಹಣ: ಮಲ್ಲೇಶ್
ಕನ್ನಡಪ್ರಭ ವಾರ್ತೆ ರಾಮನಾಥಪುರ ನ.8
ಅರಕಲಗೂಡು ತಾಲೂಕಿನಲ್ಲಿ 25 ವರ್ಷಗಳಿಂದ ನಿಸ್ವಾರ್ಥ ರಾಜಕೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶಾಸಕ ಎ.ಮಂಜು ಅವರಿಗೆ ಸಚಿವ ಸ್ಥಾನ ತಪ್ಪಿಹೋಗಿದ್ದು ನಿಜಕ್ಕೂ ಈ ತಾಲೂಕಿಗೆ ಗ್ರಹಣ ಬಡಿದಂತಾಗಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್ ಹೇಳಿದ್ದಾರೆ.
ನಿರ್ಮಾಲನಂದ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ನೇರ ನುಡಿ ದಿಟ್ಟ ರಾಜಕಾರಣ ನುಂಗಲಾರದ ತುತ್ತಾಗಿ ಕೆಲವು ಸ್ವಪಕ್ಷ ಹಾಗೂ ವಿರೋಧ ಪಕ್ಷದವರಿಗೆ ಸಿಂಹಸ್ವಪ್ನವಾಗಿ ಕಾಡಿರುವ ಹಿನ್ನೆಲೆಯೆ ಮಂಜುಗೆ ಸಚಿವ ಸ್ಥಾನ ಕೈತಪ್ಪಿ ಹೋಗಲು ಮುಳುವಾಯಿತು ಎಂದು ವ್ಯಾಖ್ಯಾನಿಸಿದರು.
ಚಿರತೆ ದಾಳಿ: ಹಸು ಸಾವು
ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ ಕೆಸವತ್ತೂರು ಗ್ರಾಮದಲ್ಲಿ ಚಿರತೆಯೊಂದು ಗ್ರಾಮದ ಕೊಟ್ಟಿಗೆ ನುಗ್ಗಿ ಹಸುವೊಂದನ್ನು ಎಳೆದೊಯ್ದು ಸಾಯಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಸಾವನ್ನಪ್ಪಿದ ಹಸು ಕೆಸವತ್ತೂರು ಗ್ರಾಮದ ಸುರೇಶ ಎಂಬುವವರಿಗೆ ಸೇರಿದ್ದು ಹಸುವನ್ನು ಜೋಳದ ಹೊಲಕ್ಕೆ ಎಳೆದೊಯ್ದು ಚಿರತೆ ಕತ್ತಿನ ಭಾಗದಲ್ಲಿ ರಕ್ತ ಹೀರಿ ಸಾಯಿಸಿದೆ.