ಹೆಜ್ಜೇನು ಕಡಿತ: ಕೃಷಿ ಕಾರ್ಮಿಕ ಅಸ್ವಸ್ಥ
ರಾಮನಾಥಪುರ: ಸಮೀಪದ ಹನ್ಯಾಳು ಕೆರೆ ಪಕ್ಕದ ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದ ಕೃಷಿ ಕಾರ್ಮಿಕನ ಮೇಲೆ ಇತ್ತೀಚೆಗೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಆತ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಘಟನೆ ನಡೆದಿದೆ. ಅರಸೀಕೆರೆ ತಾ. ಜಾಜೂರು ಗ್ರಾಮದ ಮಂಜು (35) ಎಂಬಾತ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯವ ಮೇಸ್ತ್ರಿ ಸರ್ವೇಶ್ ಜತೆ ಹನ್ಯಾಳು ಗ್ರಾಮದಲ್ಲಿ ಶುಂಠಿ ಕೀಳಲು ಬಂದಿದ್ದರು. ಕೆರೆ ಪಕ್ಕದ ಜಮೀನಿನಲ್ಲಿ ಶುಂಠಿ ಕೀಳುವ ಕೆಲಸದಲ್ಲಿ ಮಗ್ನರಾಗಿದ್ದಾಗ ದಿಢೀರ್ ಹೆಜ್ಜೇನು ದಾಳಿಯ ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡು ಪ್ರಜ್ಞಾಹೀನರಾದರು. ಕೂಡಲೇ ಅವರನ್ನು ಸರ್ಕಾರಿ ಆಂಬುಲೆನ್ಸ್ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಯಿತು.