ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉತ್ಪಾದನಾ ವೆಚ್ಚ ಕಡಿಮೆ ಮಾಡುವತ್ತ ಗಮನಹರಿಸಿ

Rashmi Kasaragodu
Updated On : 9 Nov 2013, 11:55 am

ಕನ್ನಡಪ್ರಭ ವಾರ್ತೆ೤ ಜಾವಗಲ್೤ ನ.9
ರೈತರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಹೆಚ್ಚಿನ ಗಮನ ಹರಿಸಬೇಕೆಂದು ಅರಸೀಕೆರೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಿ.ಕೆಂಪಚೌಡಯ್ಯ ಹೇಳಿದರು.
ಜಾವಗಲ್ ಹೋಬಳಿ ಉಂಡಿಗನಾಳು ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ವತಿಯಿಂದ(ಎಫ್.ಎಫ್.ಎಸ್)ಹೋಬಳಿ  ಮಟ್ಟದ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ ಕ್ಷೇತ್ರವು ಲಾಭದಾಯಕ ಉದ್ಯಮವಲ್ಲದಿದ್ದರೂ ದೇಶದ ಶೇ70ರಷ್ಟು ಜನ ಕೃಷಿ ಅವಲಂಬಿತರಾಗಿದ್ದಾರೆ ಎಂದರು.
ರೈತರು ಉತ್ಪಾದನಾ ವೆಚ್ಚವನ್ನು ಕಡಿಮೆಮಾಡಲು ಕೆಲವೊಂದು ಸ್ಥಳೀಯ ಬಿತ್ತನೆ ಬೀಜಗಳು, ಕೊಟ್ಟಿಗೆಗೊಬ್ಬರವನ್ನು ಉಪಯೋಗಿಸುವುದು, ಮಾಗಿ ಉಳುಮೆಮಾಡುವುದು, ಇಳಿಜಾರಿಗೆ ಅಡ್ಡವಾಗಿ ಉಳುಮೆ ಮತ್ತು ಬಿತ್ತನೆಮಾಡುವುದು ಮತ್ತು ಬಿತ್ತನೆ ಮಾಡುವುದಕ್ಕೆ 2 ತಿಂಗಳ ಮುಂಚೆ ಮಣ್ಣು ಪರೀಕ್ಷೆ ಮಾಡಿಸುವುದು, ಜೊತೆಗೆ ಅಕಡಿಬೆಳೆ ಬೆಳೆಯುವುದರೊಂದಿಗೆ ಬೆಳೆ ಪರಿವರ್ತನೆಗೆ ರೈತರು ಒತ್ತು ನೀಡಿ ಅಲ್ಪಸ್ವಲ್ಪ ಲಾಭಗಳಿಸಬಹುದಾಗಿದೆ ಎಂದು ತಿಳಿಸಿದರು.
 ಹಳ್ಳಿಗಳ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆಹೋಗುತ್ತಿದ್ದು ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತಿತವಾಗುತ್ತಿದೆ ಎಂದು ವಿಷಾದಿಸಿದರು. ರೈತರು ಕೃಷಿ ಜೊತೆಗೆ ಪೂರಕವಾಗಿ ಹೈನುಗಾರಿಕೆ, ತೋಟಗಾರಿಕೆ, ಜೇನುಸಾಕಾಣಿಕೆ, ಕುರಿಸಾಕಾಣಿಕೆಗೂ ಒತ್ತುನೀಡಿ ಬದುಕನ್ನು ಹಸನಾಗಿಸಿಕೊಳ್ಳ ಬೇಕೆಂದು ತಿಳಿಸಿದರು.
 ತಾಲೂಕು ಪಂಚಾಯ್ತಿ ಸದಸ್ಯೆ ರತ್ನಮ್ಮ ಧರ್ಮನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳಬೇಕೆಂದರು. ದಾನಿ ರೈತ ಜಗದೀಶ್ ತಮ್ಮ 1-10 ಎಕರೆಯಲ್ಲಿ 3 ಭಾಗಗಳಲ್ಲಿ 3 ರೀತಿಯ ರಾಗಿ ತಳಿ ಬಿತ್ತನೆಮಾಡಿ ಉತ್ತಮ ಬೆಳೆ ಬೆಳೆದಿರುವ ಬಗ್ಗೆ ವಿವರಿಸಿದರು.
 ಅರಸೀಕೆರೆ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ತಳಿ ತಜ್ಞ ಡಾ.ಬೋರಯ್ಯ ಮಾತನಾಡಿ, ರೈತರು ಆಯಾ ಕಾಲಕ್ಕೆ ತಕ್ಕ ತಳಿಗಳನ್ನು ಬಳಸಬೇಕು ಮತ್ತು ತಮ್ಮ ಜಮೀನುಗಳಲ್ಲಿ ಇಂಗು ಗುಂಡಿ, ಕೃಷಿಹೊಂಡ ಮತ್ತು ಗೊಬ್ಬರ ಸಂಗ್ರಹ ಗುಂಡಿ ನಿರ್ಮಿಸಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕೆಂದರು.
 ಕೃಷಿ ಅಧಿಕಾರಿ ಡಿ.ಎಸ್.ಕುಮಾರಸ್ವಾಮಿ, ಅನುವುಗಾರರಾದ ಸಂತೋಷ್, ಮಹದೇವಪ್ಪ, ಹನುಮಂತೇಗೌಡ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಯು.ಆರ್.ಸಿದ್ದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಸಭೆ ಸಮಾರಂಭಗಳಲ್ಲಿ ಮಾತ್ರ ಅಧಿಕಾರಿಗಳೊಂದಿಗೆ ಚರ್ಚಿಸುವುದು ಮತ್ತು ಪ್ರಶ್ನಿಸುವುದನ್ನು ಬಿಟ್ಟು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕಬೆಳೆಸಿ ಸಕಾಲಕ್ಕೆ ಸೂಕ್ತಮಾಹಿತಿ ಪಡೆದುಕೊಳ್ಳಬೇಕೆಂದರು.
 ಜಾವಗಲ್ ಹೋಬಳಿಯು ತೀವ್ರ ಬರಗಾಲಕ್ಕೆ ತುತ್ತಾಗಿದ್ದು ಕೆರೆ-ಕಟ್ಟೆಗಳು ಬತ್ತಿಹೋಗಿದ್ದು ಹಾಗೂ ಅಂತರ್ಜಲಮಟ್ಟ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಕ್ಷೇತ್ರದ ಶಾಸಕರು ಮತ್ತು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹೋಬಳಿಯ ಕೆರೆ-ಕಟ್ಟೆಗಳಿಗೆ ನೀರುಹರಿಸಿ ಹಾಗೂ ಯಗಚಿ ಕುಡಿಯುವ ನೀರು ಸೌಲಭ್ಯವನ್ನು ತ್ವರಿತವಾಗಿ ಒದಗಿಸಿಕೊಡುವಂತೆ ಒತ್ತಾಯಿಸಿದರು.
ಗ್ರಾಪಂ ಸದಸ್ಯ ಯು.ಆರ್. ಪರಮೇಶ್, ಮಂಜಪ್ಪ, ಚಂದ್ರಪ್ಪ, ಈಶ್ವರಪ್ಪ, ಯು.ಎಸ್.ನಂಜೇಗೌಡ, ಅನುವುಗಾರರಾದ ಮಲ್ಲೇಶ್,ಉಮೇಶ್, ಬಸವರಾಜು, ಸಂದೀಪ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement