ನಾಳೆ ವಾರ್ಷಿಕ ವಿಶೇಷ ಶಿಬಿರ
ಹೊಳೆನರಸೀಪುರ: ತಾಲೂಕಿನ ಪಡುವಲಹಿಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಳೇಕೋಟೆ ಹೋಬಳಿಗೆ ಸೇರಿದ ಚಾಕೇನಹಳ್ಳಿ ಗ್ರಾಮದಲ್ಲಿ ನ.11ರಿಂದ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಕೆ.ಎಚ್.ಯೋಗಣ್ಣ ತಿಳಿಸಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ ಶಿಬಿರ ಉದ್ಘಾಟಿಸಲಿದ್ದು, ಧ್ವಜಾರೋಹಣವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎನ್.ರಾಜಮ್ಮ ನೆರವೇರಿಸುವರು. ಏಳು ದಿನ ನಡೆಯಲಿರುವ ಈ ಶಿಬಿರದಲ್ಲಿ ಗ್ರಾಮದಲ್ಲಿನ ಚರಂಡಿ ನಿರ್ಮಾಣ ಮತ್ತು ದುರಸ್ತಿ, ರಸ್ತೆ ನಿರ್ಮಾಣ ದೇವಾಲಯದ ಪರಿಸರದ ಸ್ವಚ್ಛತೆ ಜಾನುವಾರು ತಪಾಸಣೆ, ವೈದ್ಯಕೀಯ ತಪಾಸಣೆ, ಇಂಗು ಗುಂಡಿಗಳ ತಪಾಸಣೆ, ಸಾಕ್ಷರತೆ ಮತ್ತು ಏಡ್ಸ್ ಜಾಗೃತಿ, ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ, ಉದ್ಯೋಗ ಮಾಹಿತಿ ಹಾಗೂ ಅಂತರ್ಜಲ ಮತ್ತು ಅರಣ್ಯ ಸಂರಕ್ಷಣೆಯ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಎನ್ಎಸ್ಎಸ್ ಘಟಕದ ಶಿಭಿರಾಧಿಕಾರಿ ಕೆ.ಸಿ.ಸತೀಶ್ ತಿಳಿಸಿದ್ದಾರೆ.