ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ
ಕ.ಪ್ರ.ವಾರ್ತೆ ಸಕಲೇಶಪುರ ನ.9
ವಿದ್ಯುತ್ ತಂತಿ ತಗುಲಿ ಮೃತಪಟ್ಟ ಪರಮೇಶ್ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಪರಿಹಾರದ ಚೆಕ್ಕನ್ನು ಶಾಸಕ ಎಚ್.ಕೆ ಕುಮಾರಸ್ವಾಮಿ ಶುಕ್ರವಾರ ವಿತರಿಸಿದರು. ಇತ್ತೀಚೆಗೆ ತಾಲೂಕಿನ ಕಲ್ಗಣೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಪರಮೇಶ್ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಶಾಸಕ ಕುಮಾರಸ್ವಾಮಿ ಕುಟುಂಬ ವರ್ಗಕ್ಕೆ ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಸರಕಾರ ನೀಡುತ್ತಿರುವ ಒಂದು ಲಕ್ಷ ಪರಿಹಾರ ಅಲ್ಪವಾಗಿದ್ದು, ಈ ಪರಿಹಾರದ ಮೊತ್ತವನ್ನು ಐದು ಲಕ್ಷ ರುಪಾಯಿಗೆ ಹೆಚ್ಚಿಸ ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಮಲೆನಾಡು ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಬಹಳ ಅಂತರದಲ್ಲಿ ನೆಟ್ಟಿರುವ ಪರಿಣಾಮ ತಂತಿ ನೆಲಕ್ಕೆ ಬಾಗಿರುವುದರಿಂದ ಅಪಾರ ಸಾವುನೋವುಗಳು ಸಂಭವಿಸುತ್ತಿರುತ್ತವೆ.
ಇಲಾಖೆಯವರು ಕಂಬಗಳ ಅಂತರವನ್ನು ಕಡಿಮೆ ಮಾಡಿ ನೆಡುವುದರಿಂದ ಇಂತಹ ಅವಘಡಗಳನ್ನು ತಡೆಯಬಹುದು ಎಂದರು. ಮುಂದಿನ ದಿನಗಳಲ್ಲಿ ವಿದ್ಯುತ್ ಅವಘಡದಿಂದ ಸಾವು-ನೋವು ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆಗಾರರಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.