ಸಲಿಂಗಕಾಮಿ ವೈದ್ಯ ಗಡಿಪಾರಿಗೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ನ 9
ಸಲಿಂಗಕಾಮದಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ವೈದ್ಯ ಡಾ.ಪಾಲಾಕ್ಷ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅವರನ್ನು ಗಡಿ ಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾ ಎಸ್ಪಿ ಕಚೇರಿಗೆ ಬಂದು ಕೆಲ ಸಮಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದರು.
ಖಾಸಗಿ ವೈದ್ಯ ಡಾ.ಪಾಲಾಕ್ಷ ಸೇರಿದಂತೆ ಸಲಿಂಗಕಾಮ ತೊಡಗಿದ್ದ ಇತರೇ 13 ಆರೋಪಿಗಳನ್ನು ನಗರ ಪೊಲೀಸರು ಕಳೆದ ಸೋಮವಾರ ಬಂಧಿಸಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಸಲಿಂಗಕಾಮ ಜಾಲವನ್ನು ಬೇಧಿಸಿರುವ ಪೊಲೀಸರು ಡಾ.ಪಾಲಾಕ್ಷ ಸೇರಿ 13 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದ ತಂಡ, ಕಾಮಾಂಧರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಶ್ಲಾಘೀಸುತ್ತೇವೆ ಎಂದು ಹೇಳಿದರು. ಮಕ್ಕಳ ತಜ್ಞ ಹಾಗೂ ತವರು ಚಾರಿಟೇಬಲ್ ಟ್ರಸ್ಟ್ನ ಡಾ.ಎಚ್.ಕೆ.ಪಾಲಾಕ್ಷ (45) ಅವರೊಬ್ಬ ವೈದ್ಯನಾಗಿದ್ದು ಇಂಥ ಹೇಯ ಕೃತ್ಯ ನಡೆಸುತ್ತಿರುವುದು ಸಮಾಜ ತಲೆ ತಗ್ಗಿಸುವಂತಹದಾಗಿದೆ. ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್ ಹಾಗೂ ಹಳೇ ಹೈಸ್ಕೂಲು ಮೈದಾನದಲ್ಲಿ ಸಲಿಂಗಕಾಮ ಚಟುವಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಕಾಮುಕರು ಸಿಕ್ಕಿಬಿದ್ದಿದ್ದಾರೆ. ಬಂಧಿತರಲ್ಲಿ ಮಕ್ಕಳ ತಜ್ಞ ಡಾ.ಫಾಲಾಕ್ಷ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ವೈದ್ಯ ಪಾಲಾಕ್ಷ ತಮ್ಮ ತವರು ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯುವ ಮತ್ತು ಮಕ್ಕಳಿಲ್ಲದವರಿಗೆ ದತ್ತು ನೀಡುವ ಕೆಲಸವನ್ನೂ ಮಾಡುತ್ತಿದ್ದರು. ಅಂತಹ ವ್ಯಕ್ತಿ ಸಲಿಂಗಕಾಮದಲ್ಲಿ ಭಾಗಿಯಾಗಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈತನ ಟ್ರಸ್ಟ್ನಲ್ಲಿ ಸಾಕಷ್ಟು ಅನಾಥ ಮಕ್ಕಳು ಆಶ್ರಯ ಪಡೆಯುತ್ತಿರುವುದರಿಂದ ಸಾರ್ವಜನಿಕರು ಅಲ್ಲಿರುವ ಮಕ್ಕಳನ್ನು ವಾಪಸ್ ಪಡೆದು ಸುರಕ್ಷಿತ ಜಾಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾಲಾಕ್ಷ ನಡೆಸುತ್ತಿರುವ ಟ್ರಸ್ಟನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾವಲು ಪಡೆ ಜಿಲ್ಲಾಧ್ಯಕ್ಷ ಎಚ್.ಎನ್.ನಟೇಶ್, ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ನವೀನ್ಕುಮಾರ್, ಮಂಜುನಾಥ್ ಇತರರು ಇದ್ದರು.