ಪ್ರತಿ ಪ್ರಜೆಗೂ ಕಾನೂನು ಸಾಕ್ಷರತೆ ಅಗತ್ಯ: ನ್ಯಾ. ಗಿರೀಶ್
ಅರಕಲಗೂಡು: ಪ್ರತಿ ಪ್ರಜೆಯೂ ಕಾನೂನಿನ ಸಾಕ್ಷರತೆ ಹೊಂದುವುದು ಅಗತ್ಯವಾಗಿದ್ದು, ಇದರಿಂದ ಜೀವನದಲ್ಲಿ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ, ವ್ಯಾಜ್ಯ ಕಟ್ಟಳೆಗಳಲ್ಲೇ ತನ್ನ ಜೀವಿತದ ಸಮಯವನ್ನು ಕಳೆದು ಬದುಕು ವ್ಯರ್ಥಗೊಳ್ಳುವುದು ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಧೀಶ ಗಿರೀಶ್ ತಿಳಿಸಿದರು.
ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜನರ ಸಮಯ ಮತ್ತು ಹಣ ಎರಡನ್ನೂ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.
ಅದರ ಫಲವಾಗಿ ಜನರಿಗೆ ಕಾನೂನು ಸಾಕ್ಷರತೆ ದೊರಕಿಸಲು ಮುಂದಾಗಿದೆ.ಅದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಕಾನೂನು ಸಾಕ್ಷರರಾಗಬೇಕು ಮತ್ತು ಅವಶ್ಯವಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯಬೇಕು ಎಂದು ನುಡಿದರು.
ವಕೀಲರ ಸಂಘದ ಕಾರ್ಯದರ್ಶಿ ಎಸ್.ಟಿ.ಪ್ರಕಾಶ್, ವಕೀಲ ಶಂಕರಯ್ಯ, ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ದೊಡ್ಡೇಗೌಡ, ಹಿರಿಯ ಉಪನ್ಯಾಸಕ ಬಿ.ಸಿ.ಮಂಜೇಗೌಡ, ಉಪನ್ಯಾಸಕ ಶಾಂತರಾಜು, ವಿಜಯಕುಮಾರ್,ಮಧುಪ್ರಕಾಶ್ ಇತರರು ಉಪಸ್ಥಿತರಿದ್ದರು.