ಪ್ರಾಮಾಣಿಕರಿಗೆ ಭಗವಂತನಲ್ಲಿ ಅರ್ಪಿಸಿಕೊಳ್ಳುವ ಶಕ್ತಿ'
ಬೇಲೂರು: ಯಾವ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರುತ್ತದೆಯೋ ಅಂತಹವರಿಗೆ ಭಗವಂತನಲ್ಲಿ ಅರ್ಪಿಸಿಕೊಳ್ಳುವ ಶಕ್ತಿ ಇರುತ್ತದೆ ಎಂದು ರಮೇಶ್ ಉಮ್ರಾಣಿ ಸ್ವಾಮೀಜಿ ತಿಳಿಸಿದರು.
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ರಾಮಕೃಷ್ಣ ಭಾವ ಪ್ರಚಾರ, ಸ್ವಾಮಿ ವಿವೇಕಾನಂದರ 150 ಜನ್ಮ ವರ್ಷಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವಿವೇಕಾನಂದ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರು ಎಂದು ಹೇಳಿದರು. ಒಬ್ಬ ಮನುಷ್ಯ ಮಹಾತ್ಮನಾಗಬೇಕಾದರೆ ಆತನಲ್ಲಿ ದೈಹಿಕ ಶಕ್ತಿ, ನೈತಿಕಶಕ್ತಿ, ಭೌದ್ದಿಕ ಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿ ಇರಬೇಕು. ಇವುಗಳ ಜೊತೆಗೆ ಸತ್ಯಪರಿಪಾಲನೆ, ನಿಸ್ವಾರ್ಥತೆ, ವಿಶ್ವ ಭ್ರಾತೃತ್ವವನ್ನು ಮೈಗೂಡಿಸಿಕೊಂಡಿದ್ದರೆ ಅಂತಹ ಮೇರು ವ್ಯಕ್ತಿತ್ವವನ್ನು ಹತ್ತಿಕ್ಕಲು ಯಾವ ಶಕ್ತಿಗೂ ಸಾಧ್ಯವಿಲ್ಲ. ಇವೆಲ್ಲವನ್ನು ಮೈಗೂಡಿಸಿಕೊಳ್ಳಬೇಕೆಂದರೆ ಸ್ವಾಮಿ ವಿವೇಕಾನಂದರಂತಹ ಮಹಾನ ದಾರ್ಶನಿಕರ ಚರಿತ್ರೆ, ಸಿದ್ದಾಂತ, ಮಹತ್ವ ಹಾಗೂ ಅವರ ದ್ಯೇಯೋದ್ದೇಶಗಳ ಚಿಂತನೆ ಮೇಲೆ ಅಧ್ಯಯನ ಮಾಡಿದಾಗ ತನಗೆ ತಾನೇ ವಿಶೇಷವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಯುವಕರು, ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದ ಜೊತೆಗೆ ದೇಶಪ್ರೇಮ, ತ್ಯಾಗ ಬಲಿದಾನಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾಮಿ ವಿವೇಕಾನಂದ ರಥಯಾತ್ರಾ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಹರಿ, ಸದಸ್ಯ ಶ್ರೀನಿಧಿ, ಕೃಷ್ಣೇಗೌಡ, ಇಂದಿರಮ್ಮ, ಭಾರತೀಗೌಡ, ರಾಜ್ಯ ಕೆಜೆಪಿ ಕಾರ್ಯದರ್ಶಿ ಕೊರಟಿಗೆರೆ ಪ್ರಕಾಶ್, ಕನಾಯಕನಹಳ್ಳಿ ಮಹದೇವ್, ಪುರಸಭೆ ಸದಸ್ಯ ಮೋಹನ್ ಇತರರು ಇದ್ದರು.