ಮಳೆ ನೀರಿಗಿಂತ ಶುದ್ಧ ನೀರು ಮತ್ತೊಂದಿಲ್ಲ
ಕನ್ನಡಪ್ರಭ ವಾರ್ತೆ ಹಾಸನ ನ. 10
ಮಳೆ ನೀರಿಗಿಂತ ಶುದ್ಧ ನೀರು ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಂಶೋಧಕ ಹಾಗೂ ತಾಂತ್ರಿಕ ಸಲಹೆಗಾರ ಎ.ಆರ್. ಶಿವಕುಮಾರ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವಂದೇ ಮಾತರಂ ತರುಣ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಮಳೆ ನೀರು ಸಂಗ್ರಹಣೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ನೀರು ಅತ್ಯವಶ್ಯಕವಾಗಿ ಬೇಕೆ ಬೇಕು. ನೀರು ಇದ್ದರೆ ಎಲ್ಲಾ ಕೆಲಸಕಾರ್ಯಗಳು ಸರಾಗವಾಗಿ ಸಾಗುತ್ತದೆ. ನೀರು ಎಲ್ಲಿ ಲಭ್ಯವಾಗುತ್ತದೆ ಅಲ್ಲಿ ನಾಗರೀಕತೆ ಮತ್ತು ಊರುಗಳು ಬೆಳೆಯುತ್ತದೆ ಎಂದರು.
ಹಿಂದೆ ನೀರು ತರುವಾಗ ಹೆಣ್ಣು ಮಕ್ಕಳು ಸಂತೋಷದಿಂದ ಕೆರೆ ಕಟ್ಟೆ ಮತ್ತು ಕಾಲುವೆಗೆ ಹೋಗುತ್ತಿದ್ದು, ಆ ವೇಳೆ ಸ್ನೇಹಿತರೊಂದಿಗೆ ಕೆಲ ಸಮಯ ದಡದಲ್ಲಿ ಕುಳಿತು ತಮ್ಮ ವಿಚಾರವನ್ನು ವಿನಿಮಯ ಮಾಡಿಕೊಂಡು ಒಟ್ಟಾಗಿ ಸೇರಿಸುತ್ತಿದ್ದರು.
ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲಿ ಸರಿಯಾಗಿ ನೀರೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಜೀವನ ಶೈಲಿಗಳು ಆಗಿದೆ. ಹೀಗೆ ಮುಂದುವರೆದರೇ ಮುಂದಿನ ದಿವಸಗಳಲ್ಲಿ ಪೆಟ್ರೋಲಲ್ತರ ನೀರನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಳೆ ನೀರನ್ನು ಶೇಖರಿಸಿ ನೀರನ್ನು ಉಳಿಸುವುದರ ಮೂಲಕ ಕಷ್ಟದ ಪರಿಸ್ಥಿತಿಯನ್ನು ದೂರ ಇಡಲು ಮುಂದಾಗುವಂತೆ ಕಿವಿಮಾತು ಹೇಳಿದ ಅವರು, ಮಳೆ ನೀರು ಸಂಗ್ರಹದಲ್ಲಿ ನಾವು ಮೂರು ರೀತಿಯಲ್ಲಿ ಕಾಣುತ್ತಿದ್ದೇವೆ. ಯಾರು ಕೂಡಾ ಮಳೆ ನೀರನ್ನು ವ್ಯರ್ಥ ಮಾಡದೆ ಅದನ್ನು ಪಿಲ್ಟರ್ ಮಾಡಿ ಸಂಗ್ರಹಿಸುವ ಮೂಲಕ ಶುದ್ಧ ನೀರನ್ನು ಬಳಸ ಬಹುದು ಎಂದು ಸಲಹೆ ನೀಡಿದರು.
ಬೆಂಗಳೂರು ಮಹಾನಗರದ ಅನೇಕ ಭಾಗಗಳಲ್ಲಿ ಕೆರೆಗಳು ಇದ್ದವು. ಈಗ ಆ ಸ್ಥಳದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ಕ್ರೀಡಾಂಗಣ, ಮೈದಾನ ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ಸ್ಥಾಪಿತವಾಗಿದೆ. ಈ ಸ್ಥಳದಲ್ಲಿದ್ದ ಕೆರೆಯನ್ನು ನಾಶ ಮಾಡಲಾಗಿದೆ.
ಹಾಸನದ ಚನ್ನಪಟ್ಟಣ ಕೆರೆ ಈಗ ನೂತನ ಬಸ್ ನಿಲ್ದಾಣವಾಗಿದೆ. ಹಳೆ ಬಸ್ ನಿಲ್ದಾಣ ಮತ್ತು ಹೌಸಿಂಗ್ ಬೋರ್ಡ್ ಕೂಡಾ ಬೀರನಹಳ್ಳಿ ಕೆರೆ ಆಗಿತ್ತು. ಹೀಗಾಗಿ ಬಹುತೇಕ ಬೋರ್ಗಳಲ್ಲಿ ನೀರು ಲಭ್ಯವಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ನೀರಿಗಾಗಿ ಹಾಹಾಕಾರ ಪರಿಸ್ಥಿತಿ ಬಂದಿದೆ. ಹೀಗೆ ಮುಂದುವರೆದರೇ ಹಿಂದೆ ದೇಶ ದೇಶಗಳ ನಡುವೆ ಯುದ್ಧವಾದಂತೆ ಮುಂದಿನ ದಿವಸಗಳಲ್ಲಿ ನಮ್ಮಲ್ಲೆ ನೀರಿಗಾಗಿ ಒಂದು ಯುದ್ಧದ ರೀತಿಯಲ್ಲಿಯೇ ಒಡೆದಾಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರೊಜೆಕ್ಟರ್ ಮೂಲಕ ನೀರು ಸಂಗ್ರಹದ ಬಗ್ಗೆ ಪ್ರಾತ್ಯಕ್ಷಿತೆ ನೀಡಲಾಯಿತು. ಮಳೆ ನೀರಿನಿಂದ ಶುದ್ಧ ನೀರು ಪಡೆಯುವ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಮತೇಶ್, ಔಷಧಿ ವ್ಯಾಪಾರಿಗಳು ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಿರಿಗೌಡ, ಶ್ರೀನಾಥ್ ಇತರರು ಇದ್ದರು.