ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಚ್ಚಿದ ಚಿರತೆ ಉಪಟಳ

Rashmi Kasaragodu
Updated On : 11 Nov 2013, 12:23 pm


ಹಾಸನ: ಜಿಲ್ಲೆಯಾದ್ಯಂತ ಚಿರತೆ ಹಾವಳಿ ಅಧಿಕಗೊಂಡಿದ್ದು, ಜನನಿಬಿಡ ಪ್ರದೇಶಗಳಲ್ಲಿ ಚಿರತೆಗಳು ಅಡ್ಡಾಡುವ ಮೂಲಕ ಜಿಲ್ಲೆಯ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿದೆ.
ಜ್ವಲಂತ ಸಮಸ್ಯೆಗಳ ಪೈಕಿ ಚಿರತೆ ಹಾವಳಿ ಪ್ರಮುಖವಾಗಿದ್ದು, ಅದರ ಹಾವಳಿ ಮಿತಿ ಮೀರುತ್ತಿದೆ. ಜಿಲ್ಲೆಯಲ್ಲಿ ಒಂದರ ಹಿಂದೆ ಒಂದರಂತೆ ಚಿರತೆಗಳು ಸೆರೆ ಸಿಕ್ಕುತ್ತಿದ್ದರೂ ಇವುಗಳ ಹಾವಳಿ ಮಾತ್ರ ತಪ್ಪಿಲ್ಲ.
ಹಾಸನ ತಾಲೂಕಿನ ಸಾಲಗಾಮೆ, ಮೊಸಳೆಹೊಸಳ್ಳಿ, ಗೌರಿಪುರ, ಶಾಂತಿಗ್ರಾಮ, ಅರಕಲಗೂಡು, ಚನ್ನರಾಯಪಟ್ಟಣದ ಹಿರಿಸಾವೆ, ಶ್ರವಣಬೆಳಗೊಳ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಜೊತೆಗೆ ಜಾನುವಾರುಗಳನ್ನು ತಿಂದು ಹಾಕುತ್ತಿವೆ. ಅಷ್ಟೇ ಅಲ್ಲದೆ ಬೆಳ್ಳಂಬೆಳಗ್ಗೆ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನತೆಯಲ್ಲಿ ತೀವ್ರ ಭಯ ಉಂಟು ಮಾಡುತ್ತಿವೆ.
ಬೆಟ್ಟ-ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಚಿರತೆಗಳು ವಾಸ್ತವ್ಯ ಹೂಡಿವೆ. ಬೆಟ್ಟಗಳಲ್ಲಿ ಪವನಶಕ್ತಿ ಉತ್ಪಾದನೆಗಾಗಿ ಫ್ಯಾನ್ಗಳನ್ನು ಹಾಕಿರುವುದರಿಂದ ಅದರ ಸದ್ದಿಗೆ ಚಿರತೆಗಳು ಬೆಟ್ಟದಿಂದ ಕೆಳಗೆ ಇಳಿದು ಗ್ರಾಮೀಣ ಪ್ರದೇಶ ಸುತ್ತಮುತ್ತ ವಾಸ್ತವ್ಯ ಹೂಡುತ್ತಿವೆ. ಇದರಿಂದ ಬೆಳ್ಳಂಬೆಳಗೆಯೇ ಚಿರತೆಗಳು ಗ್ರಾಮಗಳಿಗೆ ದಾಳಿ ಇಟ್ಟು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ.
ಹಾಸನ ತಾಲೂಕಿನಲ್ಲಿ ಸುಮಾರು 4ರಿಂದ 5, ಹೊಳೆರಸೀಪುರ ತಾಲೂಕಿನಲ್ಲಿ ಮೂರ್ನಾಲ್ಕು ಚಿರತೆಗಳು, ಹಿರೀಸಾವೆ, ಶ್ರವಣಬೆಳಗೊಳ ಹಾಗೂ ಅರಕಲಗೂಡು ತಾಲೂಕಿನಲ್ಲಿ ಮೇಲಿಂದ ಮೇಲೆ ಚಿರತೆಗಳ ಹಾವಳಿ ಕಂಡು ಬರುತ್ತಿವೆ. ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚಿ ಚಿರತೆಗಳಿದ್ದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾವೆ. ಇತ್ತೀಚೆಗೆ ಇವುಗಳ ಸಂತತಿ ಹೆಚ್ಚಾಗಿದ್ದು, ಮರಿಗಳ ರಕ್ಷಣೆಗಾಗಿ ಚಿರತೆಗಳು ಹೆಚ್ಚು ದಾಳಿಯನ್ನು ನಡೆಸುತ್ತಿವೆ ಎನ್ನಲಾಗಿದೆ.
ಆಲೂಗಡ್ಡೆ, ಜೋಳ, ಶುಂಠಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುವಂತಹ ಜಿಲ್ಲೆಯಲ್ಲಿ ಚಿರತೆಗಳು ಅಡ್ಡಾಡುವ ಮೂಲಕ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುತ್ತಿವೆ. ತೋಟದಲ್ಲಿ ಜೋಳ ಬೆಳೆಯ ನಡುವೆ ಹಾಗೂ ಗಿಡಗಂಟೆಗಳು ಬೆಳೆದಿರುವ ಜಾಗದಲ್ಲಿ ಚಿರತೆಗಳು ಅಡಗಿರುತ್ತವೆ.
  ಇದರಿಂದ ರೈತರು ತಮ್ಮ ಜಮೀನಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  
ಬುದ್ಧಿವಂತ ಚಿರತೆಗಳು:  ಚಿರತೆಗಳ ಹಾವಳಿ ಹೆಚ್ಚಿರುವ ಕಡೆಗಳಲ್ಲಿ ಈಗಾಗಲೇ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದಾರೆ. ವಿಪರ್ಯಾಸ ಅಂದ್ರೆ ಚಿರತೆಗಳು ಬೋನ್ ಒಳಗೆ ಕಟ್ಟಿರುವ ನಾಯಿಗಳನ್ನು ಕಂಡು ಹತ್ತಿರ ಸುಳಿದು ಬೋನ್ ಒಳ ಹೋಗದೆ ಬುದ್ಧಿವಂತಿಕೆ ಪ್ರದರ್ಶಿಸುತ್ತಿವೆ. ಬೋನ್ಗಳು ಚಿರತೆಗಳ ಕಣ್ಣಿಗೆ ಬೀಳದಂತೆ ಗಿಡಗಂಟೆಗಳಿಂದ ಮರೆ ಮಾಚಿದ್ದರೂ ಬುದ್ಧಿವಂತಿಕೆ ಪ್ರದರ್ಶಿಸುವ ಚಿರತೆಗಳು ಹತ್ತಿರ ಸುಳಿಯದೆ ಅಲ್ಲಿಂದ ಕಾಲ್ಕಿಳುತ್ತಿವೆ.
ಬೋನ್ಗಳ ಸಂಖ್ಯೆ ಹೆಚ್ಚಿಸಬೇಕು:   ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಜಿಲ್ಲೆಯ ನಾನಾ ಕಡೆಗಳಲ್ಲಿ ಬೋನ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಆದರೆ ಜಿಲ್ಲೆಯಲ್ಲಿರುವ ಬೋನ್ಗಳ ಸಂಖ್ಯೆ ಕಡಿಮೆ. ಆದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಜಿಲ್ಲೆಯಲ್ಲಿ ಹಾಸನ, ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಚಿರತೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇವುಗಳಲ್ಲಿ ಸಾಕಷ್ಟು ಸೆರೆ ಸಿಕ್ಕಿವೆ. ಆದರೂ ಮೇಲಿಂದ ಮೇಲೆ ಚಿರತೆಗಳ ದಾಳಿ ಕಂಡು ಬರುತ್ತಿವೆ. ಅದ್ದರಿಂದ ಜಿಲ್ಲೆಯಲ್ಲಿ 10 ಬೋನ್ಗಳನ್ನು ಚಿರತೆ ಹಾವಳಿ ಇರುವ ಕಡೆಗಳಲ್ಲಿ ಇಡಲಾಗಿದೆ. ಸಾರ್ವಜನಿಕರ ದೂರಿಗೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿದೆ
ಟಿ  ಲಕ್ಷ್ಮಣ್, ಉಪ ಅರಣ್ಯಸಂರಕ್ಷಣಾಧಿಕಾರಿ   

ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement