ಎ. ಶ್ರೇಣಿ ಪಡೆವ ಹಾದಿಯಲ್ಲಿ ಹೊಳೆನರಸೀಪುರ ಕಾಲೇಜು
ಕ.ಪ್ರ.ವಾರ್ತೆ , ಹೊಳೆನರಸೀಪುರ , ನ.13
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂರು ದಿನ ಗುಣಮಟ್ಟ ಮೌಲ್ಯಮಾಪನ (ನ್ಯಾಕ್) ಪ್ರಕ್ರಿಯೆಗೆ ಒಳಪಟ್ಟಿತ್ತು. ಈ ಕಾಲೇಜು ಈಗಾಗಲೇ ಬಿ-ಶ್ರೇಣಿ ಮಾನ್ಯತೆ ಪಡೆದಿದ್ದು, ಇದನ್ನು ಎ-ಶ್ರೇಣಿಗೆ ಏರಿಸುವ ಸಂಬಂಧ ಮೂವರು ಸದಸ್ಯರನ್ನು ಒಳಗೊಂಡ ಕೇಂದ್ರ ತಂಡವು ಕಾಲೇಜಿಗೆ ಆಗಮಿಸಿತ್ತು.
ನ್ಯಾಕ್ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಹಿಮಾಚಲ ಪ್ರದೇಶದ ನಿವೃತ್ತ ಉಪ ಕುಲಪತಿ ಡಾ.ಡಾ.ಸುನಿಲ್‌ಗುಪ್ತಾ, ಗುಜರಾತ್ ವಲ್ಲಭ ವಿವಿಯ ಡಾ.ಜಯಪ್ರಕಾಶ್ ತ್ರಿವೇದಿ, ಮಹಾರಾಷ್ಟ್ರದ ಯಶವಂತ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಡಾ.ಕಲ್ಯಾಣ್‌ಕರ್ ಮೌಲ್ಯಮಾಪಕರಾಗಿ ಆಗಮಿಸಿದ್ದರು.
ಮೂರು ದಿನ ಕಾಲೇಜಿನ ನಾನಾ ವಿಭಾಗಗಳನ್ನು ಕೂಲಂಕಷವಾಗಿ ಸಮೀಕ್ಷೆ ನಡೆಸಿದ ನ್ಯಾಕ್ ಸಮಿತಿ, ಕಾಲೇಜಿನ ಮೂಲಭೂತ ಸೌಕರ್ಯಗಳು, ಶೈಕ್ಷಣಿಕ ಪ್ರಗತಿ, ಹಾಗೂ ಉಪನ್ಯಾಸಕರು ನೀಡುತ್ತಿರುವ ಗುಣಮಟ್ಟದ ಶಿಕ್ಷಣದ ಸೂಕ್ಷ್ಮ ಪರಿಶೀಲನೆ ನಡೆಸಿದರು.
ನ್ಯಾಕ್ ಸಮಿತಿ ಪ್ರತಿ ಹಂತದಲ್ಲಿಯೂ ಮೌಲ್ಯಮಾಪನ ನಡೆಸಿತಲ್ಲದೇ, ಕಾಲೇಜಿನ ಶೈಕ್ಷಣಿಕ ಪ್ರಗತಿಯಲ್ಲಿ ಗುರುತಿಸಿಕೊಂಡಿರುವ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಸದಸ್ಯರು, ಕಾಲಾಜಿನ ಹಳೆಯ ವಿದ್ಯಾರ್ಥಿಗಳ ಬಳಗ, ಪೋಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳೊಂದಿಗೂ ಸಮಿತಿ ಸದಸ್ಯರು ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದರು.
ಕೊನೆಯಲ್ಲಿ ಕಾಲೇಜಿನ ನಿರ್ವಹಣೆ, ಗುಣಮಟ್ಟದ ಶಿಕ್ಷಣ, ಪ್ರತಿ ವಿಭಾಗದ ಉಪನ್ಯಾಸಕರ ಶೈಕ್ಷಣಿಕ ಪ್ರಗತಿಗಾಗಿ ಕಾಲೇಜಿನ ಬಗ್ಗೆ ಪಟ್ಟಣದ ಜನರಲ್ಲಿನ ಆಸಕ್ತಿ ಹಾಗೂ ಅವರ ಅಭಿಪ್ರಾಯಗಳನ್ನು ಖುದ್ದಾಗಿ ಆಲಿಸಿದ ನ್ಯಾಕ್ ಸಮಿತಿಯು ಕಾಲೇಜಿನ ಹೊಣೆಯನ್ನು ಕಂಡು ಮುಕ್ತ ಕಂಠದಿಂದ ಶ್ಲಾಘಿಸಿತು. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮತ್ತಷ್ಟು ಉಪಯುಕ್ತ ಸಲಹೆಗಳನ್ನು ಸಮಿತಿ ನೀಡಿತು.
ತಾವುಗಳು ಭೇಟಿ ನೀಡಿ ಮೌಲ್ಯಮಾಪನ ಮಾಡಿರುವ ದೇಶದ ನಾನಾ ಕಾಲೇಜುಗಳ ಪೈಕಿ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಒಂದಾಗಿದೆ ಎಂದು ನ್ಯಾಕ್ ಸಮಿತಿ ತಿಳಿಸಿ, ಈ ಪ್ರಕ್ರಿಯೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ತೋರಿಸಿರುವ ಆಸಕ್ತಿ ಪಟ್ಟಿರುವ ಶ್ರಮದ ಕುರಿತಂತೆ ಸಮಿತಿ ಹರ್ಷ ವ್ಯಕ್ತಪಡಿಸಿತು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ನಯನತಾರಾಮಣಿ ನ್ಯಾಕ್ ಮಾಹಿತಿಗಳ ಸಂಗ್ರಹಣೆ ಹಾಗೂ ಅವುಗಳಿಗೆ ನೀಡಿರುವ ಸ್ಪಷ್ಟ ಮಾಹಿತಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿತು.
ಒಟ್ಟಾರೆಯಾಗಿ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆ ಕಾಲೇಜಿನ ಕೀರ್ತಿ ಗೌರವಗಳಿಗೆ ಒಂದು ವಿಶೇಷ ಮಾನ್ಯತೆಯನ್ನು ತಂದುಕೊಟ್ಟಿತಲ್ಲದೆ, ಕಾಲೇಜು ಭವಿಷ್ಯದಲ್ಲಿ ಉನ್ನತವಾಗಿ ಬೆಳೆಯಲು ಸಹಕಾರಿಯಾಗುವ ವಿಶ್ವಾಸವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ವ್ಯಕ್ತಪಡಿಸಿದರು.
ಮೌಲ್ಯಮಾಪನಾ ಸಮಿತಿಗೆ ಸಹಕರಿಸಿದ ಶಾಸಕ ಎಚ್.ಡಿ.ರೇವಣ್ಣ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಬಳಗ, ಪೋಷಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಪ್ರಾಂಶುಪಾಲರು ಅಭಿನಂದಿಸಿದರು.