'ಎಲ್ಲರ ಆಂತರ್ಯದಲ್ಲಿಯೂ ದಿವ್ಯತೆ ಉಂಟು'
ಕ.ಪ್ರ.ವಾರ್ತೆ , ಹೊಳೆನರಸೀಪುರ , ನ.13
ಪ್ರತಿಯೊಬ್ಬರ ಆಂತರ್ಯದಲ್ಲಿಯೂ ದಿವ್ಯತೆ ಇದೆ ಎನ್ನುವ ಜೀವನಾನುಭವದ ಸತ್ಯವನ್ನು ಯುವಜನಾಂಗಕ್ಕೆ ಸಾರಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ ಅವರು ಇಲ್ಲಿನ ತಾಲೂಕು ಆಡಳಿತ ಹಾಗೂ ನಾನಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಥಯಾತ್ರೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಾ ಬುಧವಾರ ಪಟ್ಟಣಕ್ಕೆ ಆಗಮಿಸಿದ ವಿವೇಕಾನಂದರ ರಥಯಾತ್ರೆಯ ಭವ್ಯ ಮೆರವಣಿಗೆಯ ನಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರ ಜೀವನಸಂದೇಶಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಾಗಲು ಈ ರಥ ಯಾತ್ರೆಯನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ವ್ಯಕ್ತಿಯ ವ್ಯಕ್ತಿತ್ವನ್ನು ರೂಪಿಸಲು ನೈತಿಕತೆ ಹಾಗೂ ಆಧ್ಯಾತ್ಮಿಕತೆಯ ಮಿಳಿತವಾಗಬೇಕಿದ್ದು, ಇಂದಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಹೆಚ್ಚಿನದಾಗಿ ಬೇಕಾಗಿರುವುದನ್ನು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿ, ನಮ್ಮ ಸನಾತನ ಸಂಸ್ಕತಿಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೂ ತಲುಪಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಕಾರ್ಯೋನ್ಮುಖವಾಗಿದೆ ಎಂದ ಅವರು, ವಿವೇಕಾನಂದರ ವಾಣಿ ನಮ್ಮ ಬಹುಮುಖ ಪ್ರತಿಭೆಯ ಶ್ರೇಷ್ಠ ಶುದ್ಧ ಪ್ರಾಮಾಣಿಕ ಹಾಗೂ ಕೌಶಲ್ಯಪೂರ್ಣ ವ್ಯಕ್ತಿತ್ವ ಹೊರಹೊಮ್ಮಿಸಲು ಸಹಕಾರಿಯಾಗಿದೆ ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಕೇವಲ ನಮ್ಮ ದೇಶವಷ್ಟೇ ಅಲ್ಲದೇ, ಇಡೀ ವಿಶ್ವವೇ ಅನುಸರಿಸಬೇಕಾದ ಜೀವನ ಸಂದೇಶ ನೀಡಿದ ಮಹಾನ್ ಚೇತನ ವಿವೇಕಾನಂದರದು ಎಂದರಲ್ಲದೇ, ಇಂದಿನ ಯುವ ಸಮುದಾಯ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಸ್ವಾಮಿ ತ್ಯಾಗೇಶ್ವರಾನಂದ ಮಾತನಾಡಿ, ನಮ್ಮ ಬೆಳವಣಿಗೆಯ ರೂವಾರಿಗಳು ನಾವೇ ಆಗಿದ್ದು, ಯಾವ ವಿದ್ಯಾಭ್ಯಾಸದಿಂದ ಶೀಲ ನಿರ್ಮಾಣವಾಗುತ್ತದೋ, ಮತ್ತು ಅದು ಉತ್ಕೃಷ್ಟವಾಗಿರುತ್ತದೋ ಅಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು ಎಂದರು. ಸ್ವಾಮಿ ಯುಕ್ತೇಶಾನಂದ, ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಬಿವಿಪಿ ವಿವೇಕಾನಂದರ ಕುರಿತಂತೆ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್.ಎಲ್.ಎನ್ ವಿದ್ಯಾಮಂದಿರದ ಮಕ್ಕಳು ಆಕರ್ಷಕ ನೃತ್ಯ ರೂಪಕ ನಡೆಸಿಕೊಟ್ಟರು.
ಸ್ವಾಮಿ ವಿವೇಕಾನಂದರ ರಥಯಾತ್ರೆಗೆ ಆಧ್ಯಾತ್ಮ ಪ್ರಕಾಶ ಕಾರ್ಯಾಲಯದ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ, ಲಯನ್ಸ್ ರೋಟರಿ ಸಂಸ್ಥೆ, ಸ್ವಾಮಿ ವಿವೇಕಾನಂದ ಯುವ ವೇದಿಕೆ, ಪತಂಜಲಿ ಯೋಗ ಕೂಟ, ಎಬಿವಿಪಿ ಸಂಘಟನೆ, ತಾಲೂಕು ಕಸಾಪ, ತಾಲೂಕು ಸರ್ಕಾರಿ ನೌಕರರ ಸಂಘ, ಸರ್ಕಾರಿ ನರ್ಸಿಂಗ್ ಕಾಲೇಜು, ಪುರಸಭೆ ಇನ್ನಿತರರು ಅಭೂತಪೂರ್ವ ಸಹಕಾರ ನೀಡಿ ರಥಯಾತ್ರೆಯನ್ನು ಯಶಸ್ವಿಗೊಳಿಸಲು ಸಹಕರಿಸಿದರು.
ಸ್ವಾಮಿ ವಿವೇಕಾನಂದರ ರಥಯಾತ್ರೆಯನ್ನು ಪಟ್ಟಣದ ಹೇಮಾವತಿ ವೃತ್ತದ ಬಳಿಯಲ್ಲಿ ತಹಸೀಲ್ದಾರ್ ಶಿವಶಂಕರಪ್ಪ, ಪುರಸಭೆ ಅಧ್ಯಕ್ಷೆ ಕಲಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಹಾಗೂ ನಾನಾ ಸಂಘಟನೆಗಳು ಸ್ವಾಗತಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆಯು ಸುಮಾರು 3ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.