'ಕನ್ನಡಿಗರ ಧೋರಣೆಯೇ ಮುಳಿವು'
ಕ.ಪ್ರ.ವಾರ್ತೆ , ಹೊಳೆನರಸೀಪುರ , ನ.13
ಅನ್ಯ ಭಾಷೆ ಹಾಗೂ ಅನ್ಯ ಭಾಷಿಕರನ್ನು ದೂರುವ ಮೊದಲು ಕನ್ನಡಿಗರು ಆತ್ಮಾಭಿಮಾನದಿಂದ ಕನ್ನಡವನ್ನು ಮುಕ್ತವಾಗಿ ಮಾತನಾಡುವ ಔದಾರ್ಯತೆ ಬೆಳೆಸಿಕೊಂಡಾಗ ಮಾತ್ರ ಕನ್ನಡದ ಏಳಿಗೆ ಹಾಗೂ ಕನ್ನಡದ ಉಳಿವು ಸಾಧ್ಯ ಎಂದು ಕನ್ನಡ ಉಪನ್ಯಾಸಕ ಲೋಕೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಹಲವು ಎಡರು-ತೊಡರುಗಳ ನಡುವೆಯೂ ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಅವಿಚ್ಛಿನ್ನವಾಗಿ ಉಳಿದಿರುವುದೇ ಕನ್ನಡದ ಗಟ್ಟಿತನ ತೋರುತ್ತದೆ ಎಂದರು.
ನಮ್ಮ ರಾಜಕೀಯ ಧೋರಣೆಗಳು ಭಾಷೆ ನೆಲ ಜಲದ ಉಳಿವಿಗಾಗಿ ಹೋರಾಟ ನಿರಂತರಗೊಳಿಸಬೇಕಾದ ಅಗತ್ಯತೆ ಇದ್ದು, ಕನ್ನಡ ಮತ್ತು ಕನ್ನಡತನವನ್ನು ವಿಶ್ವಾತ್ಮಕವಾಗಿ ಬೆಳೆಸಲು ಆತ್ಮವಿಶ್ವಾಸವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ನುಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಎಸ್.ರಾಧಾಕೃಷ್ಣ ಮಾತನಾಡಿ, ಕನ್ನಡಿಗರ ಅತಿಯಾದ ಔದಾರ್ಯವೇ ನಮ್ಮ ಭಾಷೆ ನಾಡು ನೆಲ ಜಲದ ಉಳಿವಿಗೆ ಮಾರಕವಾಗದಂತೆ ಎಚ್ಚರ ವಹಿಸಬೇಕಾದ ಹೊಣೆ ಕನ್ನಡಿಗರೆಲ್ಲರ ಮೇಲಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ, ಕಲೆ ಸಂಸ್ಕತಿ ಇತಿಹಾಸ ಹಾಗೂ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ಅದ್ವಿತೀಯ ಸಾಧನೆಗೈದ ನಾಡಾಗಿದ್ದು, ಭಾಷೆ ಗಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರವಾದ ಹೊಣೆಗಾರಿಕೆ ಭವಿಷ್ಯದ ಪ್ರಜೆಗಳಾದ ಯುವಜನತೆಯ ಕೈಯಲ್ಲಿದೆ ಎಂದರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ತಾಲೂಕಿನ ಹಿರಿಯ ಸಾಹಿತಿ ಗುಂಜೇವು ಅಣ್ಣಾಜಪ್ಪ ಅವರು ಮಾತನಾಡಿ, ಅಂಕಲ್-ಆಂಟಿ ಸಂಸ್ಕೃತಿಯನ್ನು ಬಿಟ್ಟು, ಅಪ್ಪ-ಅಮ್ಮನ ಪ್ರೀತಿಗೆ ಬೆಲೆ ಕೊಡಿ. ಅಲ್ಲದೇ ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ ನಂತರದಲ್ಲಿ ಇನ್ನಿತರ ಭಾಷೆಗಳ ಬಗ್ಗೆ ಅವಶ್ಯಕತೆಯ ಆದ್ಯತೆಯನ್ನು ನೀಡುವಂತೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಆರ್.ಸರೋಜಿನಿದೇವಿ ಮಾತನಾಡಿ, ಕಲಿಕೆ ಹಾಗೂ ಆಸಕ್ತಿಗಳು ನಿರಂತರವಾಗಿದ್ದಾಗ ಮಾತ್ರವೇ ಯಾವುದೇ ಭಾಷೆಯ ಉಳಿವು ಸಾಧ್ಯವಾಗಬಲ್ಲದು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ, ಪತ್ರಕರ್ತ ಎಚ್.ವಿ.ಸುರೇಶ್‌ಕುಮಾರ್ ಮಾತನಾಡಿದರು.
ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಬಾ.ರಾ.ಸುಬ್ಬರಾಯ, ಹಿರಿಯ ಕಲಾವಿದ ಎಚ್.ಆರ್.ವೀರಬಸಪ್ಪ ಇದ್ದರು.