ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆ ರಸ್ತೆ ದುರಸ್ತಿಗೆ ಪತ್ರ ಚಳವಳಿ

Vishwanath S
Updated On : 14 Nov 2013, 12:10 pm

ಕ.ಪ್ರ.ವಾರ್ತೆ ,  ಹಾಸನ ,  ನ. 13
ಜಿಲ್ಲೆಯಲ್ಲಿನ ರಸ್ತೆಗಳನ್ನು ದುರಸ್ತಿಗೊಳಿಸಿ, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ (ಡಿವೈಎಫ್‌ಐ) ಕಾರ್ಯಕರ್ತರು ಬುಧವಾರ ಸಹಿ ಸಂಗ್ರಹಿಸಿ ಪತ್ರ ಚಳವಳಿ ನಡೆಸಿದರು.
ಪ್ರತಿಭಟನಕಾರರು ನಗರದ ಕೇಂದ್ರ ಅಂಚೆ ಕಚೇರಿಯ ಮುಂದೆ ಘೋಷಣೆ ಕೂಗಿ ಪತ್ರಗಳನ್ನು ಅಂಚೆ ಮೂಲಕ ಸರ್ಕಾರಕ್ಕೆ ರವಾನಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಪರದಾಡುವಂತಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳೂ ಸೇರಿದಂತೆ ಎಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಹೆದ್ದಾರಿಗಳ ಸ್ಥಿತಿಯೂ ಅದೇ ರೀತಿಯಲ್ಲಿ ಇದೆ. ರಸ್ತೆಗಳ ಇಂತಹ ಸ್ಥಿತಿಯಿಂದಾಗಿ ಜನ ಜೀವನ ಸಂಪೂರ್ಣವಾಗಿ ತೊಂದರೆ ಸುಲುಕಿದ್ದು, ಪ್ರತಿ ನಿತ್ಯ ಓಡಾಡಲು ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುದ್ದ ರಸ್ತೆಯ ಅಭಿವೃದ್ಧಿಯ ಕನಸು ಅದೇಕೋ ನನಸಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಅದೇ ರೀತಿ ಹಾಸನದಿಂದ ಗೊರೂರು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಗ್ರಹಣ ಇನ್ನೂ ಬಿಡುತ್ತಿಲ್ಲ. ಇನ್ನೂ ನಗರದೊಳಗಿನ ರಸ್ತೆಗಳು ಗುಂಡಿಮಯಗಳಾಗಿದ್ದು, ಅದನ್ನು ಮುಚ್ಚುವಂತಹ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಯವರು  ಮುಂದಾಗುತ್ತಿಲ್ಲ. ಸಾರ್ವಜನಿಕರು ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡಲು ಪ್ರಯಾಸ ಪಡುತ್ತಿದ್ದರೂ  ಅಧಿಕಾರಿಗಳು ಕಂಡೂ ಕಾಣದಂತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ರಸ್ತೆಗಳಲ್ಲಿ ಬಿದ್ದಿರುವ ಆಳುದ್ಧದ ಗುಂಡಿಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಂಡು ವಾಹನಗಳು ಸಂಚರಿಸಲು ಹರಸಾಹಸ ಪಡುವಂತಾದರೆ, ಮಳೆಗಾಲದ ನಂತರ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೆ ವಾಹನಗಳು ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸುತ್ತೆದೆ. ಜೊತೆಗೆ ರಸ್ತೆ  ಕಾಮಗಾರಿಗಳನ್ನು ಪಡೆದಂತಹ ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗುತ್ತಿದ್ದಾರೆ. ಹಾಗೆಯೆ ಕೆಲವೊಂದು ರಸ್ತೆಗಳ ಕಾಮಗಾರಿ ನಡೆದಿದ್ದರು ಸಹ ಅವು ಕಳಪೆಯಿಂದ ಕೂಡಿವೆ ಎಂದು ದೂರಿದರು.
ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು  ಸಂರ್ಪೂಣವಾಗಿ ಹಾಳಾಗುತ್ತಿದ್ದು, ಅರ್ಧಕ್ಕೆ ವಾಹನಗಳು ಕೆಟ್ಟು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ವಾಹನಗಳ ಟೈರ್ ಪಂಚರ್ ಆಗಿ ಪ್ರಯಾಣಿಕರು ಪಡಿಪಾಟಲು ಪಡುವಂತಾಗಿದ್ದರೂ ಜನಪ್ರತಿನಿಧಿಗಳು ಅಥವಾ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಹಾಸನದಿಂದ ಹೊರ ತಾಲೂಕು ಹಾಗೂ ಜಿಲ್ಲೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ ಎಂದು ಕಿಡಿಕಾರಿದರು.
ಇನ್ನೂ ರೋಗಿಗಳು ಮತ್ತು ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆತರುವುದಂತೂ ಅತೀ ಪ್ರಯಾಸಕರ. ಹಾಗೂ ಹೀಗೂ ಈ ರಸ್ತೆಯಲ್ಲಿ ಗರ್ಭಿಣಿಯವರು ಪ್ರಯಾಣಿಸಿದರೆ ಆಸ್ಪತ್ರೆ ಸೇರುವ ಮುನ್ನವೇ ರಸ್ತೆಯಲ್ಲಿ ಹೆರಿಗೆ ಆಗುವಂತಹ ಪರಿಸ್ಥಿತಿಯಿದೆ. ಇನ್ನೂ ಅನಾರೋಗ್ಯ ಪೀಡಿತರನ್ನು ಈ ರಸ್ತೆಗಳಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗದೆ ಆಳುದ್ಧ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾವು-ಬದುಕಿನ ನಡೆಸುವೆ ಹೋರಾಟ ಮಾಡುವಂತಾಗಿದೆ, ಎಷ್ಟೋ ಜನ ಆಸ್ಪತ್ರೆ ಸೇರುವ ಮುನ್ನವೇ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಹಾಸನ ನಗರದಲ್ಲಂತೂ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಗುಂಡಿಬಿದ್ದು ತೀರಾ ಅಪಾಯಕಾರಿಯಾಗಿವೆ. ರಸ್ತೆಗಳಲ್ಲಿ ಸಾರ್ವಜನಿಕರು ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ದ್ವಿಚಕ್ರ ಸವಾರರು ಮತ್ತು ಇತರೇ ವಾಹನ ಸವಾರರು ಜೀವವನ್ನೇ ಕೈಯಲ್ಲಿ ಇಟ್ಟುಕೊಂಡು ಪ್ರಯಾಣಿಸ ಬೇಕಿದೆ. ಇನ್ನು ಬೇಸಿಗೆಯಲ್ಲಂತೂ ರಸ್ತೆಗಳಲ್ಲಿ ಸಂಚರಿಸಲು ಅಸಾಧ್ಯವಾದ ಸ್ಥಿತಿ ಇದ್ದು, ಮುಖ್ಯ ರಸ್ತೆಗಳು ಧೂಳಿನಿಂದ ಕೂಡಿವೆ ಎಂದು ಆರೋಪಿಸಿದರು.
ಸರ್ಕಾರಗಳು ಸರಿಯಾಗಿ ಅನುದಾನ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿರುವುದು ಹಾಗೂ ರಾಜಕೀಯ ದ್ವೇಷದಿಂದ ಜಿಲ್ಲೆಯನ್ನು ಕಡೆಗಣಿಸಿದ ಪರಿಣಾಮವಾಗಿ ಸಾಕಷ್ಟು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿವೆ. ಇನ್ನಾದರೂ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಿ, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ ಮೂಲಕ ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಶಾವೆಲ್ ಅಮೀದ್, ಜಿಲ್ಲಾ ಮುಖಂಡ ರವಿ ಕೆಲವತ್ತಿ, ರಾಘವೇಂದ್ರ, ಪ್ರಸನ್ನ, ಸಿಐಟಿಯು ಉಪಾಧ್ಯಕ್ಷ ಪ್ರಕಾಶ್, ಎಸ್‌ಎಫ್‌ಐ ನ ಪೃಥ್ವಿ, ಶ್ಯಾಂ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement