ಜೂಜಾಟ, 9 ಮಂದಿ ಬಂಧನ: ನಗದು ವಶ
ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಜೂಜಾಡುತ್ತಿದ್ದ 9 ಮಂದಿಯನ್ನು ಬಂಧಿಸಿ, ಅವರಿಂದ 95,700 ರು.ಗಳನ್ನು ವಶಪಡಿಸಿಕೊಂಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಶ್ರವಣಬೆಳಗೊಳ ಹೋಬಳಿ, ಸುಗ್ಗನಹಳ್ಳಿ ಗ್ರಾಮದ ಮಂಜೇಗೌಡರ ಜಮೀನಿನ ಹತ್ತಿರ ಮರದ ಕೆಳಗೆ ಅಂದರ್ಬಾಹರ್ ಜೂಜಾಡುತ್ತಿದ್ದ ಬಗ್ಗೆ ಶ್ರವಣಬೆಳಗೊಳ ಪಿಎಸ್ಐ ರವಿಕುಮಾರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಡುತ್ತಿದ್ದ ದಿನ್ಕ ಗ್ರಾಮದ ರಮೇಶ್ (48), ಹಾಲುಮತ್ತಿಘಟ್ಟ ಗ್ರಾಮದ ಮಂಜೇಗೌಡ (43), ಹಿರೀಸಾವೆ ಹೋಬಳಿಯ ಸೋರೆಕಾಯಿಪುರ ಗ್ರಾಮದ ವೆಂಕಟೇಶ (33) ಮತ್ತು ಶ್ರವಣಬೆಳಗೊಳದ ಶಿವಲಿಂಗೇಗೌಡ (33)ರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 35,400 ರು. ನಗದನ್ನು ವಶಪಡಿಸಿಕೊಂಡು, ಶ್ರವಣಬೆಳಗೊಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾ. ಬಾಗೂರು ಹೋಬಳಿ, ಹೊನ್ನೇನಹಳ್ಳಿ ಗ್ರಾಮದ ರಂಗಬೋವಿ ಜಮೀನಿನ ಪಕ್ಕದಲ್ಲಿ ಸರ್ಕಾರಿ ಕಟ್ಟೆಯಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಚನ್ನರಾಯಪಟ್ಟಣ ಗ್ರಾಮಾಂತರ ಪಿಎಸ್ಐ ಸುರೇಶ್ಗೆ ಬಂದ ಮಾಹಿತಿ ಮೇರೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಬಾಗೂರು ಹೋಬಳಿಯ ಹೊನ್ನೇನಹಳ್ಳಿಯ ತಿಮ್ಮಬೋವಿ (38), ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಮಹಾದೇವರಹಳ್ಳಿಯ ಚಿಕ್ಕೇಗೌಡ (45),ಅರಸೀಕೆರೆ ತಾ. ಗಂಡಸಿ ಹೋಬಳಿಯ ಬಂಡೀಹಳ್ಳಿಯ ಕೃಷ್ಣಮೂರ್ತಿ (43), ಅರಸೀಕೆರೆ ತಾ. ಗಂಡಸಿ ಹೋಬಲಿಯ ಬಸವೇಶ್ವರ ನಗರದ ತಿರುಮಲೇಗೌಡ (34) ಮತ್ತು ಅರಸೀಕೆರೆ ತಾ. ಗಂಡಸಿಯ ನಂಜುಂಡ (30) ಎಂಬುವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 60,300 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟ್ರ್ಯಾಕ್ಟರ್ ಉರುಳಿ ವ್ಯಕ್ತಿ ಸಾವು
ಹಾಸನ: ಟ್ರ್ಯಾಕ್ಟರ್ ಬ್ರೇಕ್ನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಾಯವಾಗಿರುವ ಘಟನೆ ಚನ್ನರಾಯಪಟ್ಟಣದಲ್ಲಿ ಮಂಗಳವಾರ ನಡೆದಿದೆ. ತಾ. ನುಗ್ಗೇಹಳ್ಳಿ ಹೋಬಳಿ ಎ.ಬೆಳಗುಳಿ ತಿಮ್ಮೇಗೌಡ (55) ಸಾವನ್ನಪ್ಪಿದ ದುರ್ದೈವಿ. ತಿಮ್ಮೇಗೌಡರು ತನ್ನ ಸ್ನೇಹಿತ ಶಿವನಂಜಪ್ಪ ಹಾಗೂ ಚಾಲಕ ಬಾಳೇಗೌಡ ಜತೆ ಟ್ರ್ಯಾಕ್ಟರ್ನಲ್ಲಿ ಅಣ್ಣೇನಹಳ್ಳಿ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾ. ಎ.ತಿಮ್ಲಾಪುರ ಗೇಟ್ ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷತ್ಯೆಯಿಂದ ಓಡಿಸಿದ್ದರಿಂದ ಟ್ಯಾಕ್ಟರ್ನಿಂದ ಬಿದ್ದು ತೀವ್ರ ಗಾಯವಾಗಿದ್ದ ತಿಮ್ಮೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ವ್ಯತ್ಯಯ
ಹಾಸನ: ಚಿಕ್ಕಕೊಂಡಗೊಳ ವಿವಿ ಕೇಂದ್ರದಲ್ಲಿ ತುರ್ತು ಕಾರ್ಯ ಇರುವುದರಿಂದ ನವೆಂಬರ್ 13 ರಿಂದ 16 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯಾನಗರ, ಆಕಾಶವಾಣಿ, ಹೇಮಾವತಿ, ಶಂಖ, ಕಡಗ, ಸಾಲಗಾಮೆ, ಎಂ.ಸಿ.ಎಫ್, ಮುದ್ಲಾಪುರ, ದುದ್ಧ ಮತ್ತು ಬಸವಘಟ್ಟ ವಿ.ವಿ ಕೇಂದ್ರದಿಂದ ಸರಬರಜಾಗುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
16ಕ್ಕೆ ಜಿಪಂ ಸಭೆ ಮುಂದೂಡಿಕೆ
ಹಾಸನ: ಜಿಪಂ ಅಧ್ಯಕ್ಷರಾದ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ನ. 13ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ನಿಗದಿ ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಅನಿವಾರ್ಯ ಕಾರಣಗಳಿಂದ ನವೆಂಬರ್ 16 ಕ್ಕೆ ಮುಂದೂಡಲಾಗಿದೆ ಎಂದು ಜಿಪಂ ಸಿಇಓ ಉಪೇಂದ್ರ ಪ್ರತಾಪಸಿಂಗ್ ತಿಳಿಸಿದ್ದಾರೆ.
ಮೊಹರಂ: ನಾಳೆ ಸರ್ಕಾರಿ ರಜೆ
ಹಾಸನ: ಮೊಹರಂ ಹಬ್ಬಕ್ಕೆ ಸರ್ಕಾರ ಈ ಹಿಂದೆ ನ. 14 ರಂದು ಸಾರ್ವತ್ರಿಕ ರಜೆ ಎಂದು ಘೋಷಿಸಲಾಗಿತ್ತು. ರಾಜ್ಯ ವಕ್ಫ್ ಮಂಡಳಿಯ ಮನವಿ ಮೇರೆಗೆ ರಜೆಯನ್ನು ನವೆಂಬರ್ 14 ರ ಬದಲಾಗಿ ನವೆಂಬರ್ 15 ಕ್ಕೆ ರಜೆ ಎಂದು ತಿದ್ದುಪಡಿ ಆದೇಶ ಹೊರಡಿಸಿದೆ. ಇದನ್ನು ಗಮನಿಸುವಂತೆ ಕೋರಲಾಗಿದೆ.
ಲಿಖಿತ ಪರೀಕ್ಷಾ ಪೂರ್ವ ತರಬೇತಿ ಶಿಬಿರ
ಹಾಸನ: ಮಂಡ್ಯ ನಗರದಲ್ಲಿ ನಡೆದ ಭಾರತೀಯ ಸೇನಾ ಪಡೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಟಿಕ್ನಿಕಲ್, ಕ್ಲರಿಕಲ್, ಎಸ್.ಕೆ.ಟಿ, ನರ್ಸಿಂಗ್ ಅಸಿಸ್ಟೆಂಟ್, ಟ್ರೇಡ್ಮೆನ್ ಹಾಗೂ ಡಿ.ಎಸ್.ಸಿ ಹುದ್ದೆಗಳ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಪೂರ್ವ ತರಬೇತಿ ಶಿಬಿರವನ್ನು ನ.15 ರಿಂದ ನ. 22 ರವರೆಗೆ ಅನುಭವಿ ಉಪನ್ಯಾಸಕರಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉಚಿತವಾಗಿ ಸ್ಟಡಿ ಸರ್ಕಲ್ವತಿಯಿಂದ ಆಯೋಜಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ದೂ 08172-268374 ಸಂಪರ್ಕಿಸಲು ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಕೋರಿದ್ದಾರೆ.
ಮನೆ, ಮನೆ ಕಸ ಸಂಗ್ರಹಣೆ, ವಿಲೇವಾರಿಗೆ ಚಾಲನೆ
ಹಾಸನ: ಮನೆ-ಮನೆಯ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಆಪೆ ಆಟೋ ವಾಹನವನ್ನು ನಗರಸಭೆಯಿಂದ ಸಿದ್ಧಪಡಿಸಲಾಗಿದ್ದು, ಶಾಸಕ ಎಚ್.ಎಸ್. ಪ್ರಕಾಶ್ ವಾಹನ ಚಾಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಗರಸಭೆ ಆವರಣದಲ್ಲಿ 10 ಆಪೆ ಆಟೋ ವಾಹನಗಳಿಗೆ ಪೂಜೆ ಸಲ್ಲಿಸಿದ ನಂತರ ಶಾಸಕರೆ ಕುಳಿತು ಚಾಲನೆ ಮಾಡುವ ಮೂಲಕ ಉತ್ಸಾಹ ತೋರಿಸಿದರು.
ನಂತರ ನಗರದ ಸಾರ್ವಜನಿಕರು ನಗರಸಭೆ ಕೈಗೊಂಡಿರುವ ನಿರ್ಮಲ ನಗರ ನಿರ್ಮಾಣಕ್ಕೆ ಸಹಕರಿಸಬೇಕು. ಆಪೆ ಆಟೋಗಳಲ್ಲಿ ನಗರದ ಕಸವನ್ನು ಸಾರ್ವಜನಿಕರು ಹಾಕಿ ಸರಕರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಉಪಾಧ್ಯಕ್ಷ ಇರ್ಷಾದ್ಪಾಷ, ಸದಸ್ಯರಾದ ಎಚ್.ಎಸ್.ಅನಿಲ್ಕುಮಾರ್, ಬಟ್ಟೆ ಗೋಪಾಲ್, ವಿಜಯ ಕುಮಾರ್, ನಗರಸಭೆ ಆಯುಕ್ತ ನಾಗಭೂಷಣ್ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.
'ನೆಲ ಜಲ ಭಾಷೆ ಉಳಿಸುವುದು ಕನ್ನಡಿಗರ ಕರ್ತವ್ಯ'
ಜಾವಗಲ್: ಈ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೇರ್ಲಿಗೆ ಮಲ್ಲೇಗೌಡ ತಿಳಿಸಿದರು.
ನೇರ್ಲಿಗೆ ಗ್ರಾಮದಲ್ಲಿ ಕನ್ನಡ ಸಂಘದವರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶಿಕ್ಷಕ ನಾಗರಾಜು, ಎಸ್ಡಿಎಂಸಿ ಉಪಾಧ್ಯಕ್ಷ ತಿಮ್ಮಪ್ಪ ಮಾತನಾಡಿದರು. ಗ್ರಾಪಂ ಸದಸ್ಯ ಶಂಕರಮ್ಮ, ಜಗದೀಶ್, ವಿಜಯ ಕುಮಾರ್, ಪ್ರಭಾರಿ ಮುಖ್ಯ ಶಿಕ್ಷಕ ಮೋಹನಕುಮಾರ್, ಮುಖ್ಯ ಶಿಕ್ಷಕಿ ಶಶಿಕಲಾ, ಸುನಂದ ಕನ್ನಡ ಸಂಘದ ಪ್ರಸನ್ನ, ನಾಗರಾಜು ರವೀಶ್, ನವೀನ್ ಇದ್ದರು. ಕಾರ್ಯಕ್ರಮದ ಅಂಗವಾಗಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ದಬ್ಬೆ ಕೃಷಿ ಪತ್ತಿನ
ಸಂಘದ ಮಾಜಿ ಅಧ್ಯಕ್ಷರಿಗೆ ಸನ್ಮಾನ
ಬೇಲೂರು: ತಾಲೂಕು ದಬ್ಬೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಸಂಘದ ಈವರೆಗಿನ ಅಧ್ಯಕ್ಷರಾಗಿದ್ದ ಕೆ.ಟಿ.ಸೋಮೇಗೌಡ, ಡಿ.ಕೃಷ್ಣಮೂರ್ತಿ, ಸುಮನಾರಾಯಣಗೌಡ, ಕೆ.ಎಂ.ವೀರಭದ್ರೇಗೌಡ, ಎನ್.ಆರ್.ನಾರಾಯಣಗೌಡ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸನ್ಮಾನಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ತಾಪಂ ಅಧ್ಯಕ್ಷೆ ಸುಮಿತ್ರ ರುದ್ರಯ್ಯ, ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್, ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಕುಮಾರ್, ಸಿಓ ಜಗದೀಶ್, ಸದಸ್ಯ ಕೆ.ಎಂ.ರಮೇಶ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಇತರರು ಇದ್ದರು.
ಟಿಪ್ಪು ಅಪ್ರತಿಮ ವೀರ: ಶಾಸಕ
ಅರಸೀಕೆರೆ: ನಾಡಿಗಾಗಿ ತನ್ನ ದೇಹದ ರಕ್ತದ ಕಣ ಕಣ ಇರುವವರೆಗೂ ಹೋರಾಟ ನಡೆಸಿ ಪ್ರಾಣವನ್ನೆ ಬಲಿಕೊಟ್ಟ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ವೀರ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಶಾದಿ ಮಹಲ್ನಲ್ಲಿ ಟಿಪ್ಪು ವೇದಿಕೆ ಹಮ್ಮಿಕೊಂಡಿದ್ದ ಟಿಪ್ಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬ್ರಿಟೀಷರ ವಿರುದ್ಧ ಸಮರ ಸಾರಿ ನಾಡಿನ ರಕ್ಷಣೆಗಾಗಿ ಹೋರಾಟ ನಡೆಸಿದ ಟಿಪ್ಪು ಶ್ರೀರಂಗನಾಥನ ಪರಮಭಕ್ತನಾಗಿದ್ದ ಎಂದು ತಿಳಿಸಿದರು.
ತಾ. ಕರವೇ ಅಧ್ಯಕ್ಷ ಹೇಮಂತ್ಕುಮಾರ್ ಮಾತನಾಡಿ, ಟಿಪ್ಪು ಕೊಡುಗೆ ಅಪಾರ ಅವರ ಜನ್ಮ ದಿನ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ, ಅವರ ಆಳ್ವಿಕೆಯಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿತ್ತು ಎಂಬುದನ್ನು ಶ್ರೀರಂಗಪಟ್ಟಣದಲ್ಲಿನ ಐತಿಹಾಸಿಕ ಸ್ಮಾರಕಗಳು ಹೇಳುತ್ತವೆ ಎಂದು ತಿಳಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಸಮಿಉಲ್ಲಾ ಟಿಪ್ಪು ಅಭಿಮಾನಿಗಳ ಬಳಗ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿದೆ ಎಂದರು.