ನಂಬಿಕೆಗಳಿಗೆ ಧಕ್ಕೆ ತರುವ ಕಾನೂನು ನಿಲ್ಲದು: ಸ್ವಾಮೀಜಿ
ಅರಸೀಕೆರೆ: ಜನರ ಆಚಾರ- ವಿಚಾರ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಯಾವುದೇ ಕಾನೂನು ನಿಲ್ಲಲು ಸಾಧ್ಯವಿಲ್ಲ. ಮೂಢನಂಬಿಕೆ ನಿಷೇಧ ಕಾನೂನನ್ನು ಜಾರಿಗೆ ತರಲು ಉದ್ದೇಶಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹೊರಟಿರುವುದು ಸರಿಯಲ್ಲ ಎಂದು ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ ಶಿವಾಚಾರ್ಯ ಸ್ವಾಮೀಜಿ ಕಿಡಿ ಕಾರಿದರು.ತಾಲೂಕಿನ ಶಶಿವಾಳ ಗ್ರಾಮದ ವಿಜಯ ಮಹಂತೇಶ್ವರ ಸಭಾ ಮಂಟಪದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಪರಮ ತಪಸ್ವಿ ಲಿಂಗೈಕ್ಯ ವಿಜಯ ಮಹಂತ ಶಿವಯೋಗಿಗಳವರ 102ನೇ ವರ್ಷದ ಹಾಗೂ ಹುಬ್ಬಳ್ಳಿ ಮೂರು ಸಾವಿರ ಮಠದ ಲಿಂಗೈಕ್ಯ ನಿರಂಜನ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ 11ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈಗ ತರಲು ಉದ್ದೇಶಿಸಿರುವ ವಿವಾದಿತ ವಿಧೇಯಕದಲ್ಲಿ ಸ್ವಾಮೀಜಿಗಳ ಪಾದಪೂಜೆ, ಶಂಕುಸ್ಥಾಪನೆ, ಅಡ್ಡಪಲ್ಲಕ್ಕಿ ಉತ್ಸವ ನಡೆಸಬಾರದು, ರುದ್ರಾಕ್ಷಿ ಧರಿಸಬಾರದು ಎಂಬಿತ್ಯಾದಿ ಅಂಶಗಳು ಇರುವುದು ಎಷ್ಟರ ಮಟ್ಟಿಗೆ ಸರಿ? ಹಾಗಾದರೆ ನೀವು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವಾಗ ಪೂಜೆ ಮಾಡಿಸಿದ್ದೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿದರು.ಮಾಡಾಳು ತೋಂಟದಾರ್ಯ ಸ್ವಾಮೀಜಿ, ಮಾಡಾಳು ರುದ್ರಮುನಿ ಸ್ವಾಮೀಜಿ ಮಾತನಾಡಿದರು. ದುಮ್ಮೇನಹಳ್ಳಿ ಗಂಗಾಧರ್ ಇತರರಿದ್ದರು.