ಬಾಲಕಿ ಮೇಲೆ ಅತ್ಯಾಚಾರ ಯತ್ನ: ಆರೋಪಿ ಬಂಧನಕ್ಕೆ ಎಸ್ಪಿಗೆ ಆಗ್ರಹ
ಕ.ಪ್ರ.ವಾರ್ತೆ , ಹಾಸನ , ನ. 13
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡುವಂತೆ ಒತ್ತಾಯಿಸಿ ಬುಧವಾರ ಆಲೂರು ತಾಲೂಕಿನ ಬೈರಾಪುರದ ಗ್ರಾಮಸ್ಥರು ಜಿಲ್ಲಾ ಎಸ್ಪಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ತಾಲೂಕಿನ ಪ್ರಸನ್ನ (45) ಎಂಬಾತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದು, ಆತನನ್ನು ಶಿಕ್ಷಿಸುವಂತೆ ಒತ್ತಾಯಿಸಿದರು. ಕಳೆದು ತಿಂಗಳು 11ರಂದು ಮನೆಯಲ್ಲಿ ಒಬ್ಬಳೇಯಿದ್ದ ಬಾಲಕಿಯನ್ನು ಸಿಹಿ ತಿನಿಸು ನೀಡುವುದಾಗಿ ಪ್ರಸನ್ನ ಆಸೆ ತೋರಿಸಿ ಬಾಲಿಕೆಯನ್ನು ತನ್ನ ಮನೆಯ ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಬಾಲಕಯನ್ನು ವಿವಸ್ತ್ರಗೊಳಿಸಿ ಅಸಭ್ಯ ರೀತಿಯಲ್ಲಿ ವರ್ತಿಸಲು ಪ್ರಯತ್ನಿಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಜೋರಾಗಿ ಚೀರಿದ್ದಾಳೆ. ಆಗ ಅಕ್ಕ ಪಕ್ಕದ ಮನೆಯವರು ಪ್ರಸನ್ನ ಮನೆಯ ಕಡೆ ಹೋಗಿ ನೋಡಿದಾಗ ಬಾಲಕಿಯನ್ನು ವಿವಸ್ತ್ರಗೊಳಿಸಿದ್ದು, ಕಂಡು ಬಂದಿದೆ. ಇದನ್ನು ಅರಿತ ಬಾಲಕಿಯ ಪೋಷಕರು ಆಲೂರು ಠಾಣೆಗೆ ದೂರನ್ನು ನೀಡಲು ಮುಂದಾದಾಗ ಕೆಲ ಗ್ರಾಮಸ್ಥರು ದೂರು ನೀಡದಂತೆ ತಡೆದಿದ್ದಾರೆ. ಆದರೆ ನಂತರ ಪ್ರಸನ್ನ ಪದೇ ಪದೇ ಈ ಬಾಲಕಿಗೆ ತೊಂದರೆ ನೀಡುತ್ತಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿಗೆ ಮನವಿ ನೀಡಿದ್ದಾರೆ.