ಯುವ ಸಬಲೀಕರಣಕ್ಕೆ ಶ್ರಮಿಸಲು ಕರೆ
ಕ.ಪ್ರ.ವಾರ್ತೆ , ಹಾಸನ , ನ. 13
ಯುವ ಜನತೆಯಲ್ಲಿ ಅಪಾರವಾಗಿ ಶಕ್ತಿ ಹುದುಗಿದ್ದು ಅದು ಸದ್ಭಳಕೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದಲ್ಲಿರುವ ಯೋಜನೆಗಳನ್ನು ಪೂರಕವಾಗಿ ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ. ಕಚೇರಿ ಸಭಾಂಗಣದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಯುವಶಕ್ತಿಯನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಒಗ್ಗೂಡಿಸಿ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದರು. ನೆಹರು ಯುವ ಕೇಂದ್ರ ಮತ್ತು ಯುವಜನ ಸಬಲೀಕರಣ ಇಲಾಖೆಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಲಭ್ಯವಿರುವ ಕಾರ್ಯಕ್ರಮಗಳ ಜೊತೆಗೆ ಯುವ ಜನತೆಯ ಪಾಲ್ಗೊಳ್ಳುವಿಕೆಗೆ ಅವಕಾಶವಿರುವ ಇತರ ಇಲಾಖೆಗಳ ಚಟುವಟಿಕೆಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಅಪ್ನಾ ದೇಶ್, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಜಿಲ್ಲೆಯ ಅತ್ಯುತ್ತಮ ಸಂಘ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಅನುಮೋದನೆ ನಾನಾ ಇಲಾಖೆಗಳೊಂದಿಗಿನ ಆಶ್ರಯದಲ್ಲಿ ಕಾರ್ಯಕ್ರಮಕ್ಕಾಗಿ ಧನ ಸಹಾಯ ದೊರಕಿಸುವುದು. ನೆಹರು ಯುವ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಲೋಮನ್ ಮೆನೆಜಸ್ ಮಾತನಾಡಿ, ಲೀಡ್ ಬ್ಯಾಂಕ್ ಹಲವು ಯುವ ಪ್ರೋತ್ಸಾಹ ಚಟುವಟಿಕೆ, ತರಬೇತಿ, ಸಾಲ ಸೌಲಭ್ಯಗಳನ್ನು ಹೊಂದಿದೆ. ಕಾಪ್ಸೆಟ್ ಮೂಲಕ ಹಾಸನದಲ್ಲಿ ಅನೇಕ ಯುವ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ನೆಹರು ಯುವ ಕೇಂದ್ರ ಗ್ರಾಮೀಣ ಪ್ರದೇಶದಲ್ಲಿ ಯುವ ತರಬೇತಿ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಂಡಲ್ಲಿ ಬ್ಯಾಂಕ್ ಮೂಲಕ ಸಹಕಾರ ನೀಡಲಾಗುವುದು ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಅನಂತಪ್ಪ ಸಭೆಯಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಮಿತಿ ಸದಸ್ಯ ವಿವಿಧ ಇಲಾಖಾ ಅಧಿಕಾರಿಗಳ ಸಂಘಸಂಸ್ಥೆ ಪ್ರತಿನಿಧಿಗಳು ಉಪಸ್ಥಿತರಿದ್ದರು.